

ಹುಬ್ಬಳ್ಳಿ: ಯೋಗ ಗುರು ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ಉಚಿತ ಬೃಹತ್ ಯೋಗ ಶಿಬಿರದ 2ನೇ ದಿನ ಶುಕ್ರವಾರ ಹುಬ್ಬಳ್ಳಿ-ಧಾರವಾಡದ ವಿವಿಧ ಬಡಾವಣೆಗಳ ಸಾವಿರಾರು ಜನರು ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಮೂಲಕ ಯೋಗಾಸಕ್ತಿ ಪ್ರದರ್ಶಿಸಿದರು.
ವಿಆರ್ಎಲ್ ಲಾಜಿಸ್ಟಿಕ್ಸ್, ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 24/7 ಸುದ್ದಿವಾಹಿನಿ, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 2ನೇ ದಿನದ ಯೋಗ ಶಿಬಿರವನ್ನು ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ಅರವಿಂದ ಬೆಲ್ಲದ ಉದ್ಘಾಟಿಸಿ, ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ಅವಳಿ ನಗರದ ವಿವಿಧ ಬಡಾವಣೆಗಳಿಂದ ಶಿಬಿರಕ್ಕೆ ಬರುವ ಯೋಗಾಸಕ್ತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಉಚಿತವಾಗಿ ವಿಆರ್ಎಲ್ ಬಸ್ ವ್ಯವಸ್ಥೆ ಮಾಡಿದ್ದರಿಂದ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಮನೆ ಮಂದಿ ಸಮೇತ ಆಗಮಿಸಿದ್ದರು.
ಕಪಾಲಭಾತಿ ಹಾಗೂ ಅನುಲೋಮ-ವಿಲೋಮ ಪ್ರಾಣಾಯಾಮಗಳ ಮೂಲಕ ಯೋಗಾಭ್ಯಾಸ ಪ್ರಾರಂಭಿಸಿದ ಯೋಗ ಗುರು ಬಾಬಾ ರಾಮದೇವ್ ಗುರೂಜಿ, ಎರಡೂವರೆ ತಾಸು ಸೂರ್ಯ ನಮಸ್ಕಾರ, ಮಂಡೂಕಾಸಾನ, ಸುಖಾಸನ, ತಾಡಾಸನ, ವಜ್ರಾಸನ, ಸೇತುಬಂಧ ಸರ್ವಾಂಗಾಸನ, ಉತ್ಥಾನ ಶೀರ್ಷಾಸನ, ವೃಕ್ಷಾಸನ, ಅರ್ಧಕಟಿ ಚಕ್ರಾಸನ ಸೇರಿ ವಿವಿಧ ಆಸನಗಳ ಬಗ್ಗೆ ವಿವರಣೆ ನೀಡುತ್ತ, ಶಿಬಿರಾರ್ಥಿಗಳಿಂದಲೂ ಆಸನಗಳನ್ನು ಮಾಡಿಸಿದರು. ಮಧ್ಯೆ ಮಧ್ಯೆ ಇಂಪಾದ ಸಂಗೀತದೊಂದಿಗೆ ‘ಸಾರೆ ಜಹಾಂಸೆ ಅಚ್ಛಾ...’ದಂಥ ದೇಶಭಕ್ತಿ ಗೀತೆಗಳು ಅನುರಣಿಸಿದವು.
ಯೋಗಾಸನಗಳ ಮಧ್ಯೆ ಆರೋಗ್ಯಯುತ ಜೀವನಶೈಲಿ ಅಳವಡಿಸಿಕೊಳ್ಳುವ ಬಗ್ಗೆ ಸಲಹೆ ನೀಡುತ್ತ, ಮಧ್ಯೆ ಮಧ್ಯೆ ಹೃದ್ಯವಾದ ಹಾಸ್ಯ ಚಟಾಕಿಗಳನ್ನು ಹಾರಿಸಿ ಯೋಗಾಸಕ್ತರನ್ನು ನಗೆಗಡಲಲ್ಲಿ ಮುಳುಗಿಸಿದರು.
ಯೋಗ ಗುರುವಿನ ಕಿವಿಮಾತು: ಪ್ರತಿಯೊಬ್ಬರ ವ್ಯಕ್ತಿತ್ವ ಬೇರೆ ಬೇರೆಯಾಗಿರುತ್ತದೆ. ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಯೋಗಕ್ಕೆ ಇದೆ. ಪ್ರಾಣಾಯಾಮ, ಯೋಗದಿಂದ ದೇಹ ಮತ್ತು ಮನಸ್ಸು ಒತ್ತಡ ಮುಕ್ತವಾಗಿ ಚೈತನ್ಯಭರಿತವಾಗುತ್ತದೆ. ದೇಹದಲ್ಲಿ ದೈವೀಶಕ್ತಿ ನಿರ್ವಣಗೊಳ್ಳುತ್ತದೆ ಎಂದು ಬಾಬಾ ರಾಮದೇವ್ ಹೇಳಿದರು.
ನಿತ್ಯ ಯೋಗಾಭ್ಯಾಸದ ಜೊತೆಗೆ ಆಹಾರ ಸೇವನೆಯಲ್ಲಿ ನಿಯಂತ್ರಣ ಅಗತ್ಯ. ದೇಹಕ್ಕೆ ಬೇಡವಾದ ಒಂದು ತುತ್ತು ಆಹಾರ ಅಥವಾ ಒಂದು ಹನಿ ನೀರು ಹೊಟ್ಟೆ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಋಣಾತ್ಮಕ ವಿಚಾರಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮನಸ್ಸಿನಲ್ಲಿ ಋಣಾತ್ಮಕ ವಿಚಾರ ಬಾರದಂತೆ ತಡೆಯುವ ಶಕ್ತಿ ಯೋಗಕ್ಕೆ ಇದೆ. ಋಣಾತ್ಮಕ ವಿಚಾರಗಳನ್ನು ದೂರ ಇಡಬೇಕು. ಇಲ್ಲದಿದ್ದರೆ ಜೀವನದ ದಾರಿ ತಪು್ಪವ ಸಾಧ್ಯತೆ ಇರುತ್ತದೆ. ಸದಾ ಧನಾತ್ಮಕ ವಿಚಾರಗಳ ಬಗ್ಗೆ ಚಿಂತಿಸಬೇಕು. ಮನಸ್ಸಿನ ಸೂಚನೆಗಿಂತ ಹೃದಯದ ಮಾತು ಕೇಳುವುದು ಉತ್ತಮ ಎಂದರು.
ಹಿಂದು-ಮುಸ್ಲಿಮರಲ್ಲಿ ವಿಷ ಬೀಜ ಬಿತ್ತುವ ಕುತಂತ್ರ ನಡೆದಿದೆ. ಕುತಂತ್ರಿಗಳ ಮಾತುಗಳಿಗೆ ಕಿವಿಯೊಡ್ಡಬಾರದು. ಯೋಗ ಮಾಡುವುದರಿಂದ ಸಹಿಷ್ಣುತೆ ಬೆಳೆಯುತ್ತದೆ. ಕುತಂತ್ರಿಗಳ ಆಟ ನಡೆಯುವುದಿಲ್ಲ. ನಿರ್ಭೀತ ಸಮಾಜ ಸೃಷ್ಟಿಸುವ ಶಕ್ತಿ ಯೋಗಕ್ಕೆ ಇದೆ ಎಂದು ತಿಳಿಸಿದರು.
ಕೆಟ್ಟರೋಗ, ಕೆಟ್ಟ ವಿಚಾರ ಸೇರಿ ಎಲ್ಲ ಕೆಡಕುಗಳು ನಮ್ಮ ದೇಹದೊಳಗೆ ಇವೆ. ಯೋಗದಿಂದ ಕೆಟ್ಟ ವಿಚಾರ ಹಾಗೂ ರೋಗಗಳನ್ನು ದೂರ ಮಾಡಲು ಸಾಧ್ಯ. ಕುಟುಂಬದವರೆಲ್ಲ ಯೋಗ ಮಾಡುವ ಮೂಲಕ ಆರೋಗ್ಯಯುತರಾಗಿ ಬದುಕಬೇಕು. ಇದರಿಂದ ಸದೃಢ ಸಮಾಜ ನಿರ್ವಣವಾಗಲು ಸಾಧ್ಯ ಎಂದರು.
ಯೋಗ, ಪ್ರಾಣಾಯಾಮದ ಜೊತೆಗೆ ಉತ್ತಮ ಕರ್ಮ ಮಾಡಬೇಕು. ಕರ್ಮವೇ ಧರ್ಮ. ಆಲಸ್ಯತನ ದೂರ ಮಾಡಬೇಕು ಎಂದು ಹೇಳಿದರು.
ಬೀದರಿನ ಶ್ರೀ ಶಿವಯೋಗಿ ಶರಣ ಸ್ವಾಮೀಜಿ, ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಸ್ವಾಮೀಜಿ, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಾಣಿ ಆನಂದ ಸಂಕೇಶ್ವರ, ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಕನಕದಾಸ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರವಿ ದಂಡಿನ ಇತರರಿದ್ದರು.
ರೋಗ ಮುಕ್ತಿಗೆ ಪತಂಜಲಿ ಉತ್ಪನ್ನ ಬಳಸಿ: ರೋಗಗಳಿಂದ ಮುಕ್ತಿ, ರಾಸಾಯನಿಕ ರಸಗೊಬ್ಬರಗಳಿಂದ ಮುಕ್ತಿ ಪಡೆಯಬೇಕಾದರೆ ನಿತ್ಯ ಯೋಗಾಸನ ಮಾಡಬೇಕು ಹಾಗೂ ಪತಂಜಲಿ ಉತ್ಪನ್ನಗಳನ್ನು ಬಳಸಬೇಕು ಎಂದು ಬೀದರಿನ ಶ್ರೀ ಶಿವಯೋಗಿ ಶರಣ ಸ್ವಾಮೀಜಿ ಹೇಳಿದರು. ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟನಾಶಕಗಳಿಂದ ತಿನ್ನುವ ಆಹಾರ ವಿಷಕಾರಿಯಾಗುತ್ತಿದೆ. ಸಾಂಪ್ರದಾಯಿಕ ಸಗಣಿ ಗೊಬ್ಬರ ಬಳಸಿ, ಆಹಾರ ಉತ್ಪಾದಿಸಬೇಕು. ಪತಂಜಲಿ ಯೋಗ ಪೀಠ ಕೃಷಿಯಲ್ಲಿಯೂ ಬದಲಾವಣೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಪ್ರಶಂಸಿಸಿದರು. ದೇಶದೆಲ್ಲೆಡೆ ಯೋಗಾಸಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಯೋಗ ಶಿಬಿರಗಳು ನಡೆಯುತ್ತಿವೆ. ಆರೋಗ್ಯ ಸಮಾಜ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.