ಯೇಸುವಿನ ಸಂದೇಶ ಜಗತ್ತಿಗೆ ಬೆಳಕು

25ydg01
Published on

ಯಾದಗಿರಿ: ಶಾಂತಿ ಮತ್ತು ಸೌಹಾರ್ದತೆ ಪ್ರತೀಕವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸೋಮವಾರ ಜಿಲ್ಲಾದ್ಯಂತ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು.

ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಮೇಲ್ವಿಚಾರಕ ರೆ.ಸುನಂದಕುಮಾರ್, ಮಾನವರ ಪಾಪ ತೊಳೆಯಲು ಯೇಸುಪ್ರಭು ಈ ಲೋಕಕ್ಕೆ ಬಂದಿದ್ದಾರೆ. ಅವರು ಜನಿಸಿದ ಈ ದಿನವನ್ನು ಪವಿತ್ರ ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರಿಸ್ಮಸ್ ಶಾಂತಿ ಸೌಹಾರ್ದತೆ ಸಾರುವ ಹಬ್ಬವಾಗಿದ್ದು, ದೇವರು ನಮ್ಮನ್ನು ಸೃಷ್ಠಿಸಿ ಸಹೋದರತ್ವದ ಬಾಂಧವ್ಯದಲ್ಲಿ ಬೆಸದಿದ್ದಾನೆ ಎಂದರು.

ಯೇಸುವಿನ ಸಂದೇಶವನ್ನು ಪತ್ರಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು. ಕ್ರಿಸ್ಮಸ್ ಪ್ರೀತಿ ಹಾಗೂ ಸುಖ, ಶಾಂತಿಸಾರುವ ಹಬ್ಬವಾಗಿದೆ. ಯೇಸುವಿನ ಪ್ರೀತಿಯ ಜ್ಯೋತಿ ಎಲ್ಲ ಕಡೆ ಪ್ರಜ್ವಲಿಸಬೇಕಾದರೆ ನಮ್ಮಲ್ಲಿ ಕ್ರಿಯಾಶೀಲತೆ, ತ್ಯಾಗ, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಲ ಚರ್ಚ್ ಗಳಲ್ಲಿ ಕ್ರಿಸ್ಮಸ್ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಿಣ್ಣರು, ದೊಡ್ಡವರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಚರ್ಚ್ ಗಳಲ್ಲಿ ಸೇರಿದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬಕ್ಕೂ ಮುನ್ನ ಕ್ರಿಸ್ಮಸ್ ಕ್ಯಾರೋಲ್ ಎನ್ನುವ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿಪೂತರ್ಿ ಯೇಸು ಕ್ರಿಸ್ತನ ಜನನದ ವಿಷಯವಾಗಿ ಮನೆಮನೆಗೆ ತೆರಳಿ ಶುಭಸಮಾಚಾರ ತಿಳಿಸಲಾಯಿತು. ಸೆಂಟಾಕ್ಲಾಸ್ ವೇಷ ಧರಿಸಿವರು ಮಕ್ಕಳನ್ನು ಮನರಂಜನೆ ಮಾಡಿದರು. ಅಲ್ಲದೆ ಮಕ್ಕಳಿಗೆ ಸೆಂಟಾಕ್ಲಾಸ್ ವೇಷ ಧಾರಿಗಳು ಚಾಕೋಲೆಟ್, ಇನ್ನಿತರ ಸಿಹಿ ವಿತರಿಸಿ ಸಂತೋಷ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net