ಯೆಸ್ ಬ್ಯಾಂಕ್​ಗೆ ದೌಡಾಯಿಸಿದ ಗ್ರಾಹಕರು

6-hvr-03
Published on

ಹಾವೇರಿ: ದೇಶಾದ್ಯಂತ ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಹೊರಬೀಳುತ್ತಿದ್ದಂತೆ ಜಿಲ್ಲೆಯಲ್ಲಿ 3 ಶಾಖೆಗಳಿಗೆ ಶನಿವಾರ ಗ್ರಾಹಕರು ದೌಡಾಯಿಸಿ ತಮ್ಮ ಹಣ ಮರಳಿಸುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದರು.

ಯೆಸ್ ಬ್ಯಾಂಕ್ ಜಿಲ್ಲೆಯ ಹಾವೇರಿ, ರಾಣೆಬೆನ್ನೂರ ತಾಲೂಕಿನ ಕಜ್ಜರಿ, ಹಾನಗಲ್ಲ ತಾಲೂಕಿನ ಬಾಳಂಬೀಡದಲ್ಲಿ ಶಾಖೆಗಳನ್ನು ಹೊಂದಿದೆ. ಮೂರು ಶಾಖೆಗಳಲ್ಲಿ ಹಣವಿಟ್ಟ ಗ್ರಾಹಕರು ಬಂದು ಹಣ ಮರಳಿಸುವಂತೆ ವಿನಂತಿಸಿದರು. ಆದರೆ, ಸಿಬ್ಬಂದಿ ನಾಳೆ, ನಾಡಿದ್ದು, ಕೊಡುತ್ತೇವೆ. ಮುಖ್ಯಕಚೇರಿಯಿಂದ ಹಣ ಕೊಡುವ ಭರವಸೆ ನೀಡಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ನಿಮ್ಮ ಹಣ ಸಿಗುತ್ತದೆ ಎಂದು ಸಮಾಧಾನಿಸಿ ಕಳಿಸುತ್ತಿದ್ದರು. ಕೆಲ ಗ್ರಾಹಕರು ರಾತ್ರೋರಾತ್ರಿ ಬ್ಯಾಂಕ್ ಸೂಪರ್​ಸೀಡ್ ಆಗಿದೆ ಎಂದರೆ ಹೇಗೆ, ನಾವೇನು ಮಾಡಬೇಕು ಎಂದು ಸಿಬ್ಬಂದಿಗೆ ದಬಾಯಿಸಿ ಮರಳುತ್ತಿದ್ದರು.

ಬ್ಯಾಂಕ್​ನಲ್ಲಿಯೇ ಇರುವ ಎಟಿಎಂ ಸಹ ಬಂದ್ ಆಗಿದೆ. ಬೇರೆ ಎಟಿಎಂಗಳಲ್ಲಿಯೂ ಯೆಸ್ ಬ್ಯಾಂಕ್ ಖಾತೆಯ ಹಣ ಬರುತ್ತಿಲ್ಲ. ಯೆಸ್ ಬ್ಯಾಂಕ್​ನ್ನು ಆರ್​ಬಿಐ ತನ್ಮ ಸುಪರ್ದಿಗೆ ಪಡೆದು ಗ್ರಾಹಕರಿಗೆ ತಿಂಗಳಿಗೆ 50,000 ರೂ.ಗಳಂತೆ ಹಣ ನೀಡುವಂತೆ ಸೂಚಿಸಿರುವ ಮಾಹಿತಿಯಿದೆ. ಆದರೆ, ಇಲ್ಲಿ ಅದನ್ನೂ ನೀಡುತ್ತಿಲ್ಲ ಎಂದು ಗ್ರಾಹಕರೊಬ್ಬರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net