

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬುಧವಾರವೂ ನೂರಾರು ರೈತರು ಯೂರಿಯಾ ಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರು. ಗೊಬ್ಬರ ಬಂದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಟಿಜಿಟಿ ಮಳೆ ನಡುವೆಯೂ ನೂರಾರು ರೈತರು ತಮ್ಮ ಮಕ್ಕಳ ಸಮೇತ ಸರತಿಯಲ್ಲಿ ನಿಂತಿದ್ದು ಕಂಡು ಬಂದಿತು.
ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ 25 ಟನ್ ಗೊಬ್ಬರ ಬರುತ್ತದೆ. ಆದರೆ, ಹೆಚ್ಚಿನ ಬೇಡಿಕೆಯಿಂದಾಗಿ ಗೊಬ್ಬರ ಸಾಲುತ್ತಿಲ್ಲ. ಸದ್ಯ ಉತ್ತಮ ಮಳೆಯಾಗಿದ್ದರಿಂದ ದಿನವೂ ರೈತರು ಯೂರಿಯಾಕ್ಕಾಗಿ ಅಲೆದಾಡುತ್ತಿದ್ದಾರೆ.
ಖಾಸಗಿ ಅಂಗಡಿಯೊಂದಕ್ಕೆ 220 ಚೀಲ ಯೂರಿಯಾ ಬಂದಿತ್ತು. ಮಾರ್ಕೆಟ್ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಗದ್ದಲ ಉಂಟಾಗುತ್ತದೆ ಮತ್ತು ಕರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಎಪಿಎಂಸಿ ಪ್ರಾಂಗಣದಲ್ಲಿ ಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಮತ್ತು ಕೃಷಿ ಅಧಿಕಾರಿಗಳ ಸಮ್ಮುಖದಲ್ಲಿ ಒಬ್ಬ ರೈತರಿಗೆ 2 ಚೀಲ ಮಾರಾಟ ಮಾಡಲಾಯಿತು.
‘ನಮಗೆ 6 ಚೀಲ ಗೊಬ್ಬರ ಬೇಕಂತ ನಮ್ಮಪ್ಪ ನನ್ನನ್ನು ಬೆಳಿಗ್ಗೆ ಪಾಳಿಯಲ್ಲಿ ನಿಲ್ಲಿ್ಲ್ಯಾರ. ಹಸಿವು, ನೀರಡಿಕೆಯಾದರೂ ಪಾಳೆ ಬರೂತನ 6 ತಾಸು ಸಾಲಿನಲ್ಲಿಯೇ ನಿಂತೇನಿ’ ಎಂದು 5 ನೇ ತರಗತಿ ವಿದ್ಯಾರ್ಥಿನಿ ಸಾವಿತ್ರಿ ಉಳ್ಳಟ್ಟಿ ಹೇಳಿದಳು.
‘ಸುತ್ತಮುತ್ತಲಿನ ತಾಲೂಕಿನ ರೈತರೂ ಯೂರಿಯಾ ಗೊಬ್ಬರ ಖರೀದಿಗೆ ಬರುತ್ತಿರುವುದರಿಂದ ಕೊರತೆಯಾಗಿದೆ. ರೈತರು ಕೇವಲ ಯೂರಿಯಾ ಬಳಸದೇ ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು. ರೈತರ ಬೇಡಿಕೆಗನುಗುಣವಾಗಿ ಹೆಚ್ಚಿನ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಹೇಳಿದರು.
ಇನ್ನೆರಡು ದಿನಗಳಲ್ಲಿ ಡಂಬಳಕ್ಕೆ 25 ಟನ್ ಪೂರೈಕೆ
ಮುಂಡರಗಿ: ಪಟ್ಟಣದ ವಿವಿಧ ಗೊಬ್ಬರ ಮಾರಾಟ ಮಳಿಗೆಗಳಿಗೆ ಬುಧವಾರ ಯೂರಿಯಾ ಗೊಬ್ಬರ ಬರುತ್ತಿದ್ದಂತೆಯೇ ರೈತರು ಮಳಿಗೆಗಳಿಗೆ ಮುಗಿಬಿದ್ದು ಖರೀದಿಸಿದರು. ಪುನಃ ಗೊಬ್ಬರ ದೊರೆಯುತ್ತದೆಯೋ, ಇಲ್ಲವೋ? ಎನ್ನುವ ಆತಂಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಜಮಾಯಿಸಿದ್ದರು. ಎಲ್ಲ ರೈತರಿಗೂ ಗೊಬ್ಬರ ದೊರೆಯಬೇಕೆಂಬ ಕಾರಣದಿಂದ ಒಬ್ಬ ರೈತರಿಗೆ 3-4 ಚೀಲ ವಿತರಿಸಿದರು.
ತಾಲೂಕಿನಲ್ಲಿ ರೈತರು ಸೂರ್ಯಕಾಂತಿ, ಗೋವಿನಜೋಳ ಬೆಳೆದಿದ್ದಾರೆ. ಬೆಳೆಗೆ ಯೂರಿಯಾ ಗೊಬ್ಬರ ಅವಶ್ಯವಿದೆ. ಅಧಿಕಾರಿಗಳು ಸಮಪರ್ಕವಾಗಿ ಗೊಬ್ಬರ ಪೂರೈಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿರೋಳ ಗ್ರಾಮದ ಶಿವನಗೌಡ ಗೌಡರ, ದೇವರಾಜ ಕಲಕೇರಿ, ಗವಿಸಿದ್ದನಗೌಡ ಗೌಡ್ರ, ರಾಘವೇಂದ್ರ ಅಳವಂಡಿ ಒತ್ತಾಯಿಸಿದರು.
ಪಟ್ಟಣಕ್ಕೆ ಬುಧವಾರ 75ಟನ್ ಯೂರಿಯಾ ಬಂದಿದ್ದು, ಇನ್ನೆರಡು ದಿನಗಳಲ್ಲಿ ಡಂಬಳಕ್ಕೆ 25 ಟನ್ ಬರಲಿದೆ. ಇನ್ನೂ 75ಟನ್ ಯೂರಿಯಾ ಗೊಬ್ಬರ ಸದ್ಯದಲ್ಲಿಯೇ ಪೂರೈಕೆಯಾಗಲಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಅಗತ್ಯಕ್ಕೆ ತಕ್ಕಂತೆ ಯೂರಿಯಾ ಹಾಗೂ ಮತ್ತಿತರ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದರು.