

ಒಬ್ಬರಿಗೆ 2 ಚೀಲ,ಮಾರಾಟ,ಕರೊನಾ ರೈತರು, ಲಕ್ಷ್ಮೇಶ್ವರ
ಲಕ್ಷ್ಮೇಶ್ವರ: ರಸಗೊಬ್ಬರಕ್ಕಾಗಿ ಪಟ್ಟಣದಲ್ಲಿ ಗುರುವಾರ ನೂರಾರು ರೈತರು ಮುಗಿಬಿದ್ದಿದ್ದರು. ಗದ್ದಲ ನಿಯಂತ್ರಿಸಲು ಕೃಷಿ ಇಲಾಖೆ ಮತ್ತು ಗೊಬ್ಬರ ಅಂಗಡಿ ಮಾಲೀಕರು ಪಿಎಸ್ಐ ಶಿವಯೋಗಿ ಲೋಹಾರ ನೇತೃತ್ವದ ಬಂದೋಬಸ್ತ್ನಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಒಬ್ಬ ರೈತರಿಗೆ ಎರಡು ಚೀಲದಂತೆ ಮಾರಾಟ ಮಾಡಿದರು.
ಕೃಷಿ ಇಲಾಖೆ ಮಾಹಿತಿ ಪ್ರಕಾರ, ತಾಲೂಕಿನಲ್ಲಿ ಒಟ್ಟು 40,927 ಹೆಕ್ಟೇರ್ ಪೈಕಿ 37,424 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಮಳೆಗಾಲ ಪ್ರಾರಂಭದಿಂದ ಇದುವರೆಗೂ 275 ಮಿಮೀ ಮಳೆಯಾಗಬೇಕಿತ್ತು. ಆದರೆ, 295 ಮಿಮೀ ಮಳೆಯಾಗಿದೆ.
ಹತ್ತಿ, ಗೋವಿನಜೋಳ, ಬೆಳ್ಳುಳ್ಳಿ, ಉಳ್ಳಾಗಡ್ಡಿ, ಶೇಂಗಾ, ಇತರ ಬೆಳೆ ಸಮೃದ್ಧವಾಗಿ ಬೆಳೆದಿವೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಿ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಅದನ್ನು ತಪ್ಪಿಸಲು ರೈತರು ಯೂರಿಯಾ ಗೊಬ್ಬರದ ಮೊರೆ ಹೋಗುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕರೊನಾ ಸೋಂಕನ್ನು ಲೆಕ್ಕಿಸದೇ ಯೂರಿಯಾ ಗೊಬ್ಬರ ಪಡೆಯಲು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ಮಧ್ಯೆ ರೈತರ ಬೇಡಿಕೆಯಂತೆ ಗೊಬ್ಬರ, ಕ್ರಿಮಿನಾಶಕ ಸರಬರಾಜು ಮಾಡಲು ಈ ಭಾಗದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ರೈತರಾದ ಶಿವಾನಂದ ಲಿಂಗಶೆಟ್ಟಿ, ಬಸಾಪುರದ ನೀಲಕಂಠಪ್ಪ ಕನೋಜ, ಅಮರಾಪುರದ ಹನಮಂತಪ್ಪ ದೊಡ್ಡಮನಿ, ಇತರರು ಆಗ್ರಹಿಸಿದರು.
ಮತ್ತೆ ಬಂತು 560 ಚೀಲ ಯೂರಿಯಾ
ಎಪಿಎಂಸಿ ಪ್ರಾಂಗಣದಲ್ಲಿ ಒಬ್ಬ ರೈತರಿಗೆ 2 ಚೀಲದಂತೆ 300 ರೂ. ದರದಲ್ಲಿ 560 (25 ಟನ್) ಚೀಲಗಳನ್ನು ಮಾರಾಟ ಮಾಡಲಾಯಿತು. ಮತ್ತೊಂದು ಲಾರಿಯಲ್ಲಿ ಬಂದ 560 ಚೀಲ ಗೊಬ್ಬರವನ್ನೂ ಮಾರಾಟ ಮಾಡಲಾಯಿತು. ಮತ್ತೆ ಒಂದು ಲೋಡ್ ಗೊಬ್ಬರ ಬಂದಿದೆ ಎಂಬ ಸುದ್ದಿ ತಿಳಿದ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಮಳೆಯನ್ನೂ ಲೆಕ್ಕಿಸದೆ ಜಮಾವಣೆಯಾದರು. ಮೊದಲು ಗೊಬ್ಬರ ಪಡೆದ ರೈತರೇ ಮತ್ತೆ ಪಾಳಿ ಹಚ್ಚಿ ಮತ್ತೆರಡು ಚೀಲ ಗೊಬ್ಬರ ಪಡೆದರು. ತಡವಾಗಿ ಬಂದ ಅನೇಕ ರೈತರು ಗೊಬ್ಬರ ಸಿಗದೇ ಬರಿಗೈಯಲ್ಲಿ ವಾಪಸಾದರು.
ಎರಡು ಗೊಬ್ಬರ ಅಂಗಡಿಗಳಿಗೆ ಗುರುವಾರ 560 ಚೀಲ ಯೂರಿಯಾ ಬಂದಿದೆ. ಒಬ್ಬ ರೈತರಿಗೆ 2 ಚೀಲದಂತೆ ಮಾರಾಟ ಮಾಡಲಾಗಿದೆ. ಇನ್ನಷ್ಟು ಯೂರಿಯಾ ಪೂರೈಸುವಂತೆ ಕೃಷಿ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಮೂರ್ನಾಲ್ಕು ದಿನದಲ್ಲಿ ಬರಲಿದೆ. ರೈತರು ಕೇವಲ ಯೂರಿಯಾವನ್ನಷ್ಟೇ ಬಳಸದೇ ಕಾಂಪ್ಲೆಕ್ಸ್ ಗೊಬ್ಬರವನ್ನೂ ಬಳಸಬೇಕು. ಇದರಿಂದ ಬೆಳೆಗಳಿಗೆ ಅವಶ್ಯಕ ಪೋಷಕಾಂಶ ಲಭಿಸುತ್ತದೆ. ದೊಡ್ಡಗಾತ್ರದ ಹರಳಿನ ಯೂರಿಯಾ ಗೊಬ್ಬರ ಬಳಸಲು ಹಿಂದೇಟು ಹಾಕಬಾರದು.| ಪಿ.ಕೆ. ಹೊನ್ನಪ್ಪನವರ, ಎಸ್.ಬಿ. ಲಮಾಣಿ, ಕೃಷಿ ಅಧಿಕಾರಿ