

ಕುಂದಗೋಳ: ಶೇಂಗಾ, ಬಿಟಿ ಹತ್ತಿ, ಹೆಸರು, ಮೆಣಸು, ಗೋವಿನಜೋಳ ಸೇರಿ ವಿವಿಧ ಬೆಳೆಗಳಿಗೆ ಬೇಕಾಗುವ ಯೂರಿಯಾ ಗೊಬ್ಬರ ಪಡೆಯಲು ಪಟ್ಟಣದ ಸೊಸೈಟಿ ಆವರಣದಲ್ಲಿ ರೈತರು ಗುರುವಾರ ಹರಸಾಹಸ ಪಟ್ಟರು.
ಸೊಸೈಟಿಗೆ 560 ಚೀಲ ಯೂರಿಯಾ ಗೊಬ್ಬರ ಬಂದಿದ್ದು, ಒಬ್ಬ ರೈತನಿಗೆ ಮೂರರಿಂದ ನಾಲ್ಕು ಚೀಲ ವಿತರಣೆ ಮಾಡಲಾಯಿತು. ಬಹುತೇಕ ರೈತರಿಗೆ ಗೊಬ್ಬರ ಚೀಲ ಸಿಗಲಿಲ್ಲ. ಕರೊನಾ ತಾಂಡವವಾಡುತ್ತಿದ್ದರೂ ರೈತರು ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸದೇ ಗೊಬ್ಬರ ಪಡೆಯಲು ಮುಗಿ ಬಿದ್ದಿದ್ದರು.
ಸಂಶಿಯಲ್ಲೂ ಸರದಿ ಸಾಲು: ಸಂಶಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ರೈತರು ಗುರುವಾರ ಬೆಳಗ್ಗೆಯಿಂದಲೇ ಗೊಬ್ಬರ ಪಡೆಯಲು ಜಮಾಯಿಸಿದ್ದರು. ಸಂಘ ಮೊದಲೇ ತಿಳಿಸಿದಂತೆ ಪ್ರತಿ ರೈತರಿಗೆ ಎರಡು ಚೀಲ ಗೊಬ್ಬರ ವಿತರಿಸಿತು. ಆದರೆ, 340 ಚೀಲ ಯೂರಿಯಾ ಸಂಗ್ರಹಣೆ ಇದಿದ್ದರಿಂದ 170-180 ಜನರಿಗೆ ವಿತರಿಸಲಾಯಿತು. ಗೊಬ್ಬರ ಲಭ್ಯವಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಬಸವರಾಜ ಕಲ್ಲಮ್ಮನವರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 3-4 ದಿನಗಳಲ್ಲಿ ಯೂರಿಯಾ ಗೊಬ್ಬರ ಪೂರೈಕೆ ಆಗುತ್ತದೆ. ಉಳಿದ ರೈತರಿಗೂ ದೊರೆಯಲಿದೆ ಎಂದು ಸಂಘದ ಅಧ್ಯಕ್ಷ ಗೂಳನಗೌಡ ನೆರ್ತಿ, ವ್ಯವಸ್ಥಾಪಕ ಬಿ.ಡಿ. ಗೊಂದಿ ತಿಳಿಸಿದರು.
ಗೊಬ್ಬರ ಪಡೆಯಲು ಬಂದ ಪ್ರತಿಯೊಬ್ಬ ರೈತರು ಸರದಿ ಸಾಲಿನಲ್ಲಿ ನಿಂತು ಕಡ್ಡಾಯವಾಗಿ ಮಾಸ್ಕ್ ಧರಿಸಿ ಜತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್ ಸಿಂಪಡಣೆ ಬಳಿಕ ಒಳ ಬಿಡಲಾಯಿತು.