ಯೂರಿಯಾ ಗೊಬ್ಬರಕ್ಕಾಗಿ ಆತಂಕ ಸಲ್ಲ

23KUDLIGI1
Published on

ಕೂಡ್ಲಿಗಿ: ಇನ್ನೂ 15 ದಿನಗಳಲ್ಲಿ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲಾಗುವುದು. ರೈತರು ಆತಂಕಪಡಬಾರದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ರೈತರು ಹಾಗೂ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಬುಧವಾರ ಮಾತನಾಡಿದರು. ಯೂರಿಯಾ ಗೊಬ್ಬರದ ಬದಲಿಗೆ ನ್ಯಾನೋ ಯೂರಿಯಾ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಸರಬರಾಜಿನಲ್ಲಿ ಶೇ.50 ಕಡಿತಗೊಳಿಸಲಾಗಿದೆ. ಇದರಿಂದಾಗಿ ದಾಸ್ತಾನು ಇಲ್ಲ. ಆದರೂ, ಕೃಷಿ ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ. ಇನ್ನೂ 15 ದಿನಗಳಲ್ಲಿ ಯೂರಿಯಾ ಗೊಬ್ಬರ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.

ತಾಲೂಕಿಗೆ ಈಗಾಗಲೇ 160 ಟನ್ ಪೂರೈಕೆಯಾಗಿದ್ದು, ಇನ್ನೂ 340 ಟನ್ ಪೂರೈಕೆಯಾಗಬೇಕಾಗಿದೆ. ರೈತರು ತಾಳ್ಮೆಯಿಂದ ಇರಬೇಕು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಕೋರಿದರು. ನೆರೆಯ ಆಂಧ್ರಪ್ರದೇಶದಿಂದ ಆಟೋಗಳಲ್ಲಿ ಯೂರಿಯಾ ಗೊಬ್ಬರ ತಂದು ಹಳ್ಳಿಗಳಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕರಿಗೆ ರೈತರು ಮಾಹಿತಿ ನೀಡಿದರು.

ಕಳೆದ ವರ್ಷ ರೈತರು 15,591.06 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಪ್ರಸಕ್ತ ಸಾಲಿನಲ್ಲಿ ಈವರೆಗೆ 25,975 ಹೆಕ್ಟೇರ್ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆಯಾದ ಕಾರಣ ಯೂರಿಯಾ ಬೇಡಿಕೆ ಹೆಚ್ಚಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ತೇಜವರ್ಧನ ಮಾಹಿತಿ ನೀಡಿದರು.

ಕೃಷಿ ತಾಂತ್ರಿಕ ಸಹಾಯಕ ನೀಲಾನಾಯ್ಕ, ಪ್ರಮುಖರಾದ ಎಂ.ಮರುಳಸಿದ್ಧಪ್ಪ, ಕೆ.ಎನ್.ದಿನಕರ, ವಾರೀಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net