ಯೂರಿಯಾ ಗೊಬ್ಬರಕ್ಕಾಗಿ ಅಧಿಕಾರಿಗಳಿಗೆ ದಿಗ್ಬಂಧನ

JUL 24-HRP-02
Published on

ಹರಪನಹಳ್ಳಿ: ತಾಲೂಕಿನ ವಿವಿಧೆಡೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದಾರೆ. ಹಲುವಾಗಲು ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಉಂಟಾಗಿದೆ. ಆದರೆ, ಅಗತ್ಯ ಪ್ರಮಾಣದ ಯೂರಿಯಾ ರಸಗೊಬ್ಬರ ಸಿಗದ ಪರಿಣಾಮ ಬುಧವಾರ ಬೆಳಿಗ್ಗೆಯಿಂದಲೇ ರೈತರು ಕೃಷಿ ಸಹಕಾರ ಸಂಘದ ಮುಂದೆ ಜಮಾಯಿಸಿ ಗೊಬ್ಬರ ನೀಡುವಂತೆ ಆಗ್ರಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸಂಘದ ನಿರ್ದೇಶಕ ಎಸ್.ಪಿ.ಲಿಂಬ್ಯಾನಾಯ್ಕ ಮಾತನಾಡಿ, ಕಳೆದ ಒಂದು ತಿಂಗಳಿಂದ ಗೊಬ್ಬರಕ್ಕಾಗಿ ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕೃಷಿ ನಿರ್ದೆಶಕ ವಿ.ಸಿ.ಉಮೇಶ, ಬಳ್ಳಾರಿಯಿಂದ 600 ಚೀಲ ಗೊಬ್ಬರ ಬರುತ್ತಿದೆ. ತಾಳ್ಮೆಯಿಂದ ಕಾಯಿರಿ ಎಂದು ಹೇಳಿದರೂ ರೈತರು ಸಮಾಧಾನಗೊಳ್ಳಲಿಲ್ಲ. ಜಂಟಿ ಕೃಷಿ ನಿರ್ದೆಶಕ ಎಸ್.ಮಂಜುನಾಥ ಆಗಮಿಸಿ, 32 ಟನ್ ಯೂರಿಯಾ ಗೊಬ್ಬರ ಬಳ್ಳಾರಿಯಿಂದ ಬರಲಿದೆ. ಶುಕ್ರವಾರ ಅಥವಾ ಶನಿವಾರ ಹೆಚ್ಚುವರಿ ರಸಗೊಬ್ಬರ ಕೊಡುತ್ತೇವೆ ಎಂದು ಹೇಳಿದರು.

ಹರಪನಹಳ್ಳಿ ಟಿಎಪಿಎಂಎಸ್, ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ರೈತರು ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರಿಗೆ ಗೊಬ್ಬರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net