ಯೂರಿಯಾ ಗೊಬ್ಬರ ಖರೀದಿಗೆ ಕ್ಯೂ

bir uriya
ಬೀರೂರಿನ ಗೊಬ್ಬರದ ಅಂಗಡಿಯೊಂದರ ಮುಂದೆ ರೈತರು ಯೂರಿಯಾ ಗೊಬ್ಬರ ಖರೀದಿಗಾಗಿ ಸಾಲುಗಟ್ಟಿ ನಿಂತಿರುವುದು.
Published on

ಬೀರೂರು: ಹೋಬಳಿಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಹೆಚ್ಚಾಗಿರುವುದರಿಂದ ಗೊಬ್ಬರದ ಅಂಗಡಿಗಳ ಮುಂಭಾಗದಲ್ಲಿ ಮುಂಜಾನೆಯೇ ರೈತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸ್ಥಳೀಯ ಅಂಗಡಿಯಲ್ಲಿ ಯೂರಿಯಾ ಖರೀದಿಸಬೇಕಾದರೆ ನ್ಯಾನೋ ಯೂರಿಯಾ ಕಡ್ಡಾಯವಾಗಿ ಕೊಳ್ಳಬೇಕಾಗಿದೆ.

ರಾಗಿ ಬೆಳೆಗೆ ಯೂರಿಯಾ ಗೊಬ್ಬರ ಅತ್ಯವಶ್ಯಕವಾಗಿ ಬೇಕಾಗಿದ್ದು, ಹೋಬಳಿಯಲ್ಲಿ ಗೊಬ್ಬರದ ಕೊರತೆ ಉಲ್ಬಣಗೊಳ್ಳುತ್ತಿದೆ. ಈಗ ಗೊಬ್ಬರ ಸಿಗುವ ಒಂದೇ ಏಜನ್ಸಿ ಅಂಗಡಿ ಮುಂದೆ ರೈತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಅಂಗಡಿ ಮಾಲೀಕ ಯೂರಿಯಾ ಗೊಬ್ಬರದ ದರ 268 ರೂಪಾಯಿಯೊಂದಿಗೆ 170 ರೂ. ಮೊತ್ತದ ನ್ಯಾನೋ ಯೂರಿಯಾ ಲಿಕ್ವಿಡ್‌ನ್ನು ಕಡ್ಡಾಯವಾಗಿ ಕೊಳ್ಳಲೇಬೇಕೆಂಬ ಷರತ್ತು ಹಾಕಿ ಯೂರಿಯಾ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ರೈತರು ಒಲ್ಲದ ಮನಸ್ಸಿನಲ್ಲಿ ನ್ಯಾನೋ ಲಿಕ್ವಿಡ್ ಗೊಬ್ಬರವನ್ನೂ ಖರೀದಿಸುತ್ತಿದ್ದಾರೆ.

ಬೀರೂರು ಕೃಷಿ ಅಧಿಕಾರಿ ಸೋಮನಿಂಗಪ್ಪ ಮಾತನಾಡಿ, ರಾಜ್ಯಾದ್ಯಂತ ಯೂರಿಯಾ ಗೊಬ್ಬರದ ಸಮಸ್ಯೆ ಎದುರಾಗಿದೆ. ರಾಗಿ ಬೆಳೆಗೆ ಅಗತ್ಯವಾಗಿ ಯೂರಿಯಾ ಗೊಬ್ಬರ ಬೇಕಾಗಿದ್ದು, ಆದ್ದರಿಂದ ನ್ಯಾನೋ ಯೂರಿಯಾ ಲಿಕ್ವಿಡ್‌ನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾನೋ ಲಿಕ್ವಡ್‌ನ್ನೇ ರೈತರು ಬಳಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ರೈತರಿಗೆ ಅದರ ಪರಿಚಯ ಮಾಡಿಕೊಡಲು ಅಂಗಡಿ ಮಾಲೀಕರು ಈ ರೀತಿ ಯೂರಿಯಾ ಗೊಬ್ಬರದೊಂದಿಗೆ ನ್ಯಾನೋ ಲಿಕ್ವಿಡ್ ನೀಡುತ್ತಿದ್ದಾರೆ ಎಂದರು.

ಜೋಡಿತಿಮ್ಮಾಪುರ ರೈತ ಕರಿಯಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ರಾಗಿ ಬೆಳೆಗೆ 45 ದಿನಗಳು ಕಳೆದಿದೆ. ಬೆಳೆಯ ಬೆಳವಣಿಗೆಗೆ ಅಗತ್ಯವಾಗಿ ಯೂರಿಯಾ ಹಾಕಲೇಬೇಕು. ಹೋಬಳಿಯಲ್ಲಿ ಎಲ್ಲೂ ಗೊಬ್ಬರ ದೊರೆಯುತ್ತಿಲ್ಲ. ಲಭ್ಯವಿರುವ ಒಂದೇ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಆದ್ದರಿಂದ ಮುಂಜಾನೆ 5 ಗಂಟೆಗೆ ಬಂದು ಕ್ಯೂನಲ್ಲಿ ನಿಂತಿದ್ದೇವೆ. ಯೂರಿಯಾ ಗೊಬ್ಬರ ಇಲ್ಲದಿದ್ದರೆ ವರ್ಷದ ಕೂಳಿಗೂ ಭಂಗ ಬರುವ ಸಾಧ್ಯತೆ ಇದೆ ಎನ್ನುವ ಆತಂಕದಲ್ಲಿ ಖರೀದಿಗಾಗಿ ನಿಲ್ಲಲೇಬೇಕಾಗಿದೆ ಎಂದರು.

ಯೂರಿಯಾ ಗೊಬ್ಬರವನ್ನು ಬಳಸದಿದ್ದರೆ ಬೆಳೆ ನಷ್ಟ ಅನುಭವಿಸುವ ಆತಂಕದಲ್ಲಿರುವ ರೈತರ ಅವಶ್ಯಕತೆಯನ್ನು ಸರ್ಕಾರ ಪೂರೈಸಬೇಕೆಂಬುದು ರೈತರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net