ಯೂರಿಯಾ ಕೊರತೆ ಇಲ್ಲ

h10-Eeranna Kadadi 1
Published on

ಹುಬ್ಬಳ್ಳಿ: ರಾಜ್ಯದಲ್ಲಿ ಎಲ್ಲಿಯೂ ಯೂರಿಯಾ ಕೊರತೆ ಇಲ್ಲ. ರೈತರಿಗೆ ಸಮರ್ಪಕವಾಗಿ ಮುಟ್ಟಿಸುವಲ್ಲಿ ಹಲವು ಕಾರಣಗಳಿಂದ ವಿಫಲರಾಗಿದ್ದೇವೆ ಎಂದು ರಾಜ್ಯಸಭೆ ಸದಸ್ಯ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಕೂಲಿಕಾರರ ಕೊರತೆ ಉಂಟಾಗಿದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಯೂರಿಯಾ ಸಾಗಣೆ ವಿಳಂಬವಾಗುತ್ತಿದೆ. ಕೆಲ ದಿನ ರೈಲ್ವೆ ರೇಕ್​ಗಳ ಕೊರತೆಯೂ ಇತ್ತು. ಈ ವರ್ಷ ಉತ್ತಮ ಮಳೆಯಾಗಿದ್ದು, ರಾಜ್ಯದಲ್ಲಿ ಬಿತ್ತನೆ ಕ್ಷೇತ್ರದಲ್ಲಿ ಶೇ. 5ರಿಂದ 6ರಷ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಕಳೆದ ಸಾಲಿಗಿಂತ ಶೇ. 10ರಷ್ಟು ಅಧಿಕ ಪ್ರಮಾಣದಲ್ಲಿ ಯೂರಿಯಾ ಪೂರೈಕೆ ಮಾಡಿದೆ ಎಂದು ತಿಳಿಸಿದರು.

ರೈಲ್ವೆ ಸಚಿವಾಲಯ ಮಂಜೂರು ಮಾಡಿರುವ ಧಾರವಾಡ-ಬೆಳಗಾವಿ (ಮಾರ್ಗ-ಕಿತ್ತೂರ) ಹೊಸ ರೈಲು ಮಾರ್ಗದಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಾಗಲಿದೆ. ಫಲವತ್ತಾದ ಭೂಮಿ ಕಳೆದುಕೊಳ್ಳಲು ರೈತರು ಇಚ್ಛಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ರೈಲು ಮಾರ್ಗ ಹಾದು ಹೋಗುವಂತೆ ಮಾಡಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಈಶ್ವರಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ನಾಗರಾಜ ಗುರಿಕಾರ, ರವಿ ನಾಯ್ಕ ಇತರರು ಇದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ರೈತ ಮೋರ್ಚಾ ಮೇಲಿದೆ. ಈ ಸಂಬಂಧ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಪ್ರವಾಸದ ವೇಳೆ ರೈತರೊಂದಿಗೆ ಸಂವಾದ, ಚರ್ಚೆ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಒಟ್ಟು ಅಭಿಪ್ರಾಯ ಸಂಗ್ರಹಿಸಿ ಅಕ್ಟೋಬರ್​ನಲ್ಲಿ ವರದಿ ತಯಾರಿಸಿ ಸರ್ಕಾರದ ಗಮನಕ್ಕೆ ತರಲಿದ್ದೇವೆ.| ಈರಣ್ಣ ಕಡಾಡಿ, ರಾಜ್ಯಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net