

ಹಾಸನ: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಹಾಗಾಗಿ ಹಾಲಿ ಹೊರ ಬಿದ್ದಿರುವ ಫಲಿತಾಂಶಕ್ಕೆ ತಡೆ ನೀಡಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಪರಾಜಿತ ಅಭ್ಯರ್ಥಿ ಪ್ರವೀಣ್ ಗೌಡ ಎಚ್ಚರಿಕೆ ನೀಡಿದರು.
ನಾವು 32 ಮಂದಿ ಒಂದು ತಂಡವಾಗಿ ಸ್ಪರ್ಧೆ ಮಾಡಿದ್ದೆವು. ನಮಗೆ ಚಲಾವಣೆ ಆಗಿರುವ ಮತಗಳು 14 ಸಾವಿರಕ್ಕೂ ಹೆಚ್ಚಿವೆ. ಇಷ್ಟೂ ಮಂದಿ ಬೆಂಬಲಿತ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಂಗಸ್ವಾಮಿ ಅವರ ಮತ ಎಣಿಕೆ ಸಂಶಯ ಮೂಡಿಸುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಒಬ್ಬರ ಪರವಾಗಿ ಚುನಾವಣೆ ಅನುಮಾನ ಮೂಡಿದೆ. ಇದೇ ರೀತಿ ನಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಫಲಿತಾಂಶ ತಡೆ ಹಿಡಿಯಲಾಗಿದೆ. ಅದೂ ಹಾಸನದಲ್ಲೂ ಆಗಬೇಕು. ಯಾರೋ ಪ್ರಭಾವಿಗಳ ಮಾತು ಕೇಳಿ ಚುನಾವಣಾ ಸಮಿತಿ ಫಲಿತಾಂಶ ಪ್ರಕಟ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು. ಶೀಘ್ರವೇ ಎಲ್ಲ ಅಭ್ಯರ್ಥಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಕಚೇರಿಯಲ್ಲೇ ಫಲಿತಾಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಆಗಿರುವ ಅಕ್ರಮ, ಮೋಸವನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ ರಾಜ್ಯ ಮುಖಂಡರ ಗಮನಕ್ಕೆ ತರುವುದರ ಜತೆಗೆ ಕಾನೂನು ಹೋರಾಟ ಸಹ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದರ್ಶನ್, ಕಾಂತರಾಜು, ಮನು, ಆನಂದ್ ಕುಮಾರ್ ಇದ್ದರು.