ಯೂಕ್ರೇನ್​ನಿಂದ ಗದಗಕ್ಕೆ ಇಬ್ಬರ ಆಗಮನ

9-gdg-1
Published on

ಗದಗ: ಯುದ್ಧಪೀಡಿತ ಯೂಕ್ರೇನ್​ನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ಪಂಚಾಕ್ಷರಿ ನಗರದ ನಿವಾಸಿ ಆಕಾಶ ಶೇಖರಗೌಡ ಪೊಲೀಸ್ ಪಾಟೀಲ ಮತ್ತು ಚಂದನ್ ಶರಣಪ್ಪ ಸಾದರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ನಗರಕ್ಕೆ ಆಗಮಿಸಿದ ಇಬ್ಬರನ್ನೂ ಕುಟುಂಬ ಸದಸ್ಯರು, ಸ್ನೇಹಿತರು ಸಂಭ್ರಮದಿಂದ ಸ್ವಾಗತಿಸಿದರು.
ಕಳೆದ ಎರಡು ವಾರಗಳಿಂದ ರಷ್ಯಾ-ಯೂಕ್ರೇನ್ ಮಧ್ಯೆ ನಡೆದಿರುವ ಯುದ್ಧದಿಂದ ಪೋಷಕರಿಗೆ ತೀವ್ರ ಆತಂಕ ಉಂಟಾಗಿತ್ತು. ಪ್ರತಿಕ್ಷಣ ಪುತ್ರನ ಬರುವಿಕೆಗಾಗಿ ಎದುರು ನೋಡುತ್ತಿದ್ದ ಹೆತ್ತವರು ಪುತ್ರನ ಮುಖ ನೋಡಿ ಆನಂದಭಾಷ್ಪ ಸುರಿಸಿದರು. ಸುರಕ್ಷಿತವಾಗಿ ಮನೆಗೆ ಬಂದ ಮಕ್ಕಳನ್ನು ತಬ್ಬಿ ಮುದ್ದಾಡಿದರು. ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಮನೆಯೊಳಗೆ ಕರೆದುಕೊಂಡರು. ಅಕ್ಕಪಕ್ಕದ ಮನೆಯವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಕಳೆದ 14 ದಿನಗಳಿಂದ ರಷ್ಯಾ ಮತ್ತು ಯೂಕ್ರೇನ್ ಮಧ್ಯೆ ಶುರುವಾಗಿರುವ ಯುದ್ಧದಿಂದ ಅನುಭವಿಸಿದ ಕರಾಳ ಸಮಯವನ್ನು ವಿದ್ಯಾರ್ಥಿಗಳು ಎಳೆಎಳೆಯಾಗಿ ಹಂಚಿಕೊಂಡರು. ಯೂಕ್ರೇನ್​ನ ರ್ಖಾವ್ ಪಟ್ಟಣದ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದೇವು. ಫೆಬ್ರವರಿ 28ಕ್ಕೆ ಭಾರತಕ್ಕೆ ವಾಪಸ್ಸಾಗಲು ಏರ್ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ. ಫೆ. 24ರಂದೇ ಯುದ್ಧದ ಶುರುವಾಯಿತು. ರ್ಖಾವ್​ನಲ್ಲಿ ಕರ್ಫ್ಯೂ ಜಾರಿಗೊಳಿಸಿದ ಮೇಲೆ ಪ್ರತಿಕ್ಷಣವನ್ನು ಆತಂಕದಲ್ಲಿಯೇ ಕಳೆಯಬೇಕಾಯಿತು. ಶೆಲ್ ದಾಳಿ, ಮಿಸೈಲ್​ಗಳ ಹಾರಾಟ, ಭಯಾನಕವಾದ ಶಬ್ಧಗಳು ಕಂಗೆಡಿಸಿದವು. ರ್ಖಾವ್ ಮತ್ತು ಕೀವ್ ಪಟ್ಟಣದಲ್ಲಿ ಮಿಸೈಲ್​ಗಳ ಭರಾಟೆ ಜೋರಾದ ಮೇಲೆ ಸಂಪೂರ್ಣ ಭಯಭೀತರಾದೆವು. ಜೀವಂತವಾಗಿ ಭಾರತಕ್ಕೆ ಮರಳುತ್ತೇವೆ ಎಂಬ ನಂಬಿಕೆ ಹೊರಟುಹೋಗಿತ್ತು. ನಾವಿದ್ದ ಅಪಾರ್ಟ್​ವೆುಂಟ್​ನಲ್ಲಿ ಬಂಕರ್ ಇತ್ತು. ಅಲ್ಲಿ ಏಳು ದಿನ ಕಳೆದೆವು. ನಮ್ಮ ಬಳಿ ಇದ್ದ ಅಕ್ಕಿಯಿಂದ ಅನ್ನ ಮಾಡಿಕೊಂಡು ಊಟ ಮಾಡಿದೆವು. ಅದು ಖಾಲಿ ಮೇಲೆ ಬಿಸ್ಕತ್, ಚಿಪ್ಸ್ ತಿಂದು ನೀರು ಕುಡಿದು ಬದುಕಬೇಕಾಯಿತು. ರೇಷನ್ ತರಲು ಹೋಗಿದ್ದ ಹಾವೇರಿ ಜಿಲ್ಲೆಯ ನವೀನ ಮೃತಪಟ್ಟ ಸುದ್ದಿ ತಿಳಿದ ಮೇಲಂತೂ ಅಕ್ಷರಶಃ ನಲುಗಿಹೋದೆವು. ಮುಂದೇನು ಎಂಬುದೇ ತಿಳಿಯದಂತಹ ಸ್ಥಿತಿ ಎದುರಾಯಿತು.
ತದನಂತರ ರ್ಖಾವ್​ನಿಂದ 15 ಕಿಮೀ ದೂರದಲ್ಲಿರುವ ಪೈಸೋಚಿನ್ ಪ್ರದೇಶಕ್ಕೆ ತೆರಳಿದರೆ ಅಲ್ಲಿ ಭಾರತೀಯರು ಸುರಕ್ಷಿತವಾಗಿ ಇರಬಹುದು. ಆದ್ದರಿಂದ ಎಲ್ಲರೂ ಅಲ್ಲಿಗೆ ತೆರಳುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿತು. ಯುದ್ಧಭೂಮಿಯಲ್ಲಿ ಭಾರತದ ಬಾವುಟ ಹಿಡಿದು ನಡೆದುಕೊಂಡು ಪೈಸೋಚಿನ್ ಪ್ರದೇಶ ತಲುಪಿದೆವು. ಭಾರತದ ಧ್ವಜ ಸಾವಿರಾರು ಜನರ ಪ್ರಾಣ ಉಳಿಸಿತು. ನಂತರ ಪೈಸೋಚಿನ್ ಪ್ರದೇಶದಿಂದ ರುಮೇನಿಯಾ ಗಡಿ ಪ್ರದೇಶಕ್ಕೆ ಬಂದು ಸ್ಲೋವಾಕಿಯಾ ವಿಮಾನ ನಿಲ್ದಾಣದಿಂದ ದೆಹಲಿ, ಬೆಂಗಳೂರಿಗೆ ಆಗಮಿಸಿ ಗದಗ ನಗರಕ್ಕೆ ಬಂದಿದ್ದೇವೆ ಎಂದು ಹೇಳುತ್ತಿದ್ದಾಗ ಆಕಾಶ ಅವರ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net