

ಚಿತ್ರದುರ್ಗ: ಪ್ರತಿ ವರ್ಷ ಶಾಲಾ-ಕಾಲೇಜುಗಳಿಂದ ಮಕ್ಕಳು, ಯುವಸಮೂಹ ಶೇ 25ರಷ್ಟು ಡ್ರಾಪ್‌ಔಟ್ ಆಗುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಪೆಟ್ಟು ಬೀಳುತ್ತಿದೆ. ಇದನ್ನು ತಪ್ಪಿಸುವ ಕೆಲಸವಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.
ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಸೋಮವಾರ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಉತ್ಸವ-ಪಂಚ್ ಪ್ರಣ್ ಮತ್ತು ಇಂಡಿಯಾ 2047 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ರಾಷ್ಟ್ರ ನಿರ್ಮಿಸುವ ಜವಾಬ್ದಾರಿ ಜನಸಂಖ್ಯೆಯಲ್ಲಿ ಶೇ 65ರಷ್ಟಿರುವ ಯುವಸಮೂಹದ್ದಾಗಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವಶಕ್ತಿಯ ಜ್ಞಾನಕ್ಕೆ ಅಗತ್ಯ ಸಹಕಾರ ಕೊಡುತ್ತಿದೆ. ಆದರೆ, ಯೋಜನೆಗಳ ಮಾಹಿತಿ ನಿಮ್ಮಲ್ಲಿ ಇಲ್ಲವಾಗಿದೆ. ಇನ್ನಾದರೂ ಪ್ರತಿಭೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.