

ಚಿತ್ರದುರ್ಗ: ಯುವಸಮೂಹ ಶಿಕ್ಷಣದ ಜೊತೆಗೆ ಬುದ್ಧನ ಪ್ರೇಮ, ಬಸವಣ್ಣನ ಕಾಯಕ, ಅಂಬೇಡ್ಕರ್ ಮಾನವೀಯತೆ, ಕುವೆಂಪು ಅವರ ಸಮಾನತೆ ತತ್ವ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ ಹೇಳಿದರು.
ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2024-25 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್, ರೋವರ್ಸ್ ಅಂಡ್ ರೆಂಜರ್ಸ್, ಇನ್ನಿತರೆ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತಂತ್ರಜ್ಞಾನ ಯುಗದಲ್ಲಿ ನಾವು ಕಳೆದು ಹೋಗಬಾರದು. ಮೌಢ್ಯದೊಳಗೆ ಸಿಲುಕಬಾರದು. ಮಾನವೀಯ ಸಂಬಂಧ ಗಟ್ಟಿಗೊಳಿಸಿಕೊಂಡು ಮಾದರಿಯಾಗಿ ಬದುಕಬೇಕು. ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಜೆಎಫ್ ಲಯನ್ ಪ್ರೊ.ಬಿ.ಜಿ. ನಂದ್ಯಾಲ್ ಮಾತನಾಡಿ, ತಪ್ಪಾದಾಗ ಕ್ಷಮೆಯಾಚಿಸುವುದು, ಇತರರಿಂದ ಒಳಿತಾದಾಗ ಧನ್ಯವಾದ ಹೇಳುವುದು, ಮತ್ತೊಬ್ಬರ ಕೌಶಲ ಪ್ರೋತ್ಸಾಹಿಸುವುದನ್ನು ರೂಢಿಸಿಕೊಂಡರೆ ಪರಸ್ಪರ ಸಹಕಾರ, ಸಹಬಾಳ್ವೆ, ಸಂಬಂಧ ಸುಧಾರಿಸಲಿದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಪ್ರಾಚಾರ್ಯ ಪ್ರೊ. ಸಿದ್ರಾಮ ಚನಗೊಂಡ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ವಿ.ಗೋವಿಂದರಾಜು, ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಜೀಬುಲ್ಲಾ ಅವರನ್ನು ಸನ್ಮಾನಿಸಲಾಯಿತು. ರ‌್ಯಾಂಕ್ ಪಡೆದವರಿಗೆ, ಕ್ರೀಡಾ ವಿಜೇತರಿಗೆ, ವಿವಿಧ ಹಂತಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕಿ ಫೈರೋಜಾ, ಪ್ರೊ. ಲಾಲ್‌ಸಿಂಗ್ ನಾಯಕ, ಡಾ. ಮಹೇಶ್‌ನಾಯಕ, ಪ್ರಾಧ್ಯಾಪಕ ಡಾ. ಸತೀಶ್ ಗೌಡ್ರು ಇತರರಿದ್ದರು.