

ಚಿತ್ರದುರ್ಗ: ಪ್ರಜಾಪ್ರಭುತ್ವ ಯಶಸ್ಸಿಗೆ ಅಮೂಲ್ಯವಾದ ಮತದಾನದ ಹಕ್ಕಿನಿಂದ ಯುವಸಮೂಹ ವಂಚಿರಾಗಬಾರದು ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗಾರೆಹಟ್ಟಿಯ ಬೃಹನ್ಮಠ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ವೀಪ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಚುನಾವಣೆಗಳಲ್ಲೂ ಶೇ. 100ರಷ್ಟು ಮತದಾನವಾಗಬೇಕು ಎಂಬುದು ಕೇಂದ್ರ ಚುನಾವಣಾ ಆಯೋಗದ ಆಶಯ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆಗಳು ಅತ್ಯವಶ್ಯಕ ಎಂದರು.
ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸುಮಾ ಮಾತನಾಡಿ, ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಸ್ಪರ್ಧೆ ಆಯೋಜಿಸಿದ್ದು, ಇದರಲ್ಲಿ ವಿಜೇತರಾದವರಿಗೆ ಜ. 25ರಂದು ಜಿಲ್ಲಾಡಳಿತದಿಂದ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಡಿಡಿಪಿಐ ಕಚೇರಿಯ ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್, ವಿಷಯ ಪರಿವೀಕ್ಷಕರಾದ ಚಂದ್ರಣ್ಣ, ಗೋವಿಂದಪ್ಪ, ಮಹಲಿಂಗಪ್ಪ, ಸರ್ಕಾರಿ ನೌಕರರ ಜಿಲ್ಲಾ ಸಂಘದ ಕಾರ್ಯದರ್ಶಿ ಶ್ರೀನಿವಾಸ, ಮುಖ್ಯಶಿಕ್ಷಕಿ ಆಶಾರಾಣಿ, ಶಿಕ್ಷಕ ಸಿದ್ದೇಶ್, ತೀರ್ಪುಗಾರರು ಇದ್ದರು.