ಯುವಶಕ್ತಿ ಸದ್ಬಳಕೆಯಿಂದ ಕಲ್ಯಾಣ ರಾಜ್ಯ

15Bk1
Published on

ಬಸವಕಲ್ಯಾಣ: ಯುವಕರಲ್ಲಿ ಅಗಾಧ ಶಕ್ತಿ, ಸಾಮರ್ಥ್ಯವಿದ್ದು, ಸದ್ಬಳಕೆ ಮಾಡಿಕೊಂಡಲ್ಲಿ ಸುಂದರ ಸಮಾಜ, ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ. ಕಠಿಣ ಪರಿಶ್ರಮ, ಸತತ ಅಧ್ಯಯನ, ಆತ್ಮವಿಶ್ವಾಸ, ಆತ್ಮ ಪರಿವರ್ತನೆ ಸೂತ್ರಗಳನ್ನು ಪಾಲಿಸಿದರೆ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜಕ್ಕೂ ಅಮೋಘ ಕೊಡುಗೆ ನೀಡಬಹುದು ಎಂದು ಪ್ರಖರ ವಾಗ್ಮಿಗಳಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿಯು ಶನಿವಾರ ರಥ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಯುವ ಸಂಸತ್ತು-2020, ಯುವಕರ ಬೃಹತ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇಶದ ಭವಿಷ್ಯವಾಗಿರುವ ಯುವಕರು ಬೇಡುವ ಭಿಕ್ಷುಕರಾಗುವ ಬದಲು ಕೊಡುವ ದಾನಿಗಳಾಗಬೇಕು. ಇಂಥ ಅದ್ಭುತ ಶಕ್ತಿ ಅವರೊಳಗೆ ಅಡಗಿದೆ ಎಂಬುದನ್ನು ತೋರಿಸುವುದೇ ಈ ಸಮಾವೇಶದ ಉದ್ದೇಶ ಎಂದರು.
ಸಂಕಲ್ಪ, ಸಾಹಸ ಮತ್ತು ಸೇವೆ ಬದುಕಿನ ಪರಿಪೂರ್ಣತೆಗೆ ಅವಶ್ಯಕ. ಜೀವನದಲ್ಲಿ ಎದುರಾಗುವ ಕಷ್ಟ, ನೋವು, ಸೋಲು, ಸವಾಲು ಎದುರಿಸಿ ಮುನ್ನುಗ್ಗಬೇಕು. ಜನ್ಮ ನೀಡಿದ ತಂದೆ-ತಾಯಿ, ನಿಸರ್ಗ ಮತ್ತು ದೇಶ ಸೇವೆ ನಮ್ಮೆಲ್ಲರ ಧ್ಯೇಯವಾಗಬೇಕು. ಇದು ಕಾಯಕ ತತ್ವ ನೀಡಿದ ಮಹಾತ್ಮ ಬಸವಣ್ಣನವರ ಕರ್ಮಭೂಮಿ. ವಚನ ಶಬ್ದ ಕೇಳಿದರೆ ಭಕ್ತಿಯ ತರಂಗ ಏಳುತ್ತವೆ. ದೇವರ ಪೂಜೆ ಮಾಡುವ ಕೈಗಳಿಗಿಂತ ಕಸಗುಡಿಸುವ ಕೈಗಳು ಶ್ರೇಷ್ಠ. ಉಂಡವರಿಗಿಂತ ಉಣಿಸಿದವರಲ್ಲಿ ಪ್ರಸನ್ನತೆ ಕಾಣುವುದೇ ದಾಸೋಹ. ಕಾಯಕ ಚಿಂತನೆ ನೆಲದಲ್ಲಿ ಯುವಕರ ಬೃಹತ್ ಸಮಾವೇಶ ಸಂಘಟಿಸಿ ಯುವಶಕ್ತಿ ಮೂಲಕ ಕಲ್ಯಾಣ ಕನರ್ಾಟಕವನ್ನು ವಿಕಾಸದೆಡೆಗೆ ಒಯ್ಯಬೇಕೆಂಬ ಬಸವರಾಜ ಪಾಟೀಲ್ ಸೇಡಂ ಸಂಕಲ್ಪಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ ಎಂದು ಹೇಳಿದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಭಾರತೀಯ ಸೇನೆಯ ನಿವೃತ್ತ ಉಪ ದಂಡನಾಯಕ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ. ಬಿರಾದಾರ ಮಾತನಾಡಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಸೇಡಂನ ಶ್ರೀ ಸದಾಶಿವ ಸ್ವಾಮೀಜಿ, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಶಾಸಕ ಬಿ.ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಸರ್ದಾರ್ ಬಲಬೀರಸಿಂಗ್, ಪ್ರಮುಖರಾದ ರೇವಣಸಿದ್ಧಪ್ಪ ಜಲಾದೆ, ಸೂರ್ಯಕಾಂತ ನಾಗಮಾರಪಳ್ಳಿ, ಡಾ.ಬಸವರಾಜ ಪಾಟೀಲ್ ಅಷ್ಟೂರ್, ಸುನೀಲ ಪಾಟೀಲ್, ಅನೀಲಕುಮಾರ ರಗಟೆ, ಸುಧೀರ ಕಾಡಾದಿ, ಗುಂಡುರೆಡ್ಡಿ, ಶರಣು ಸಲಗರ್, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಸುಭಾಷ ಹೊಳಕುಂದೆ, ಬಸವರಾಜ ಬಾಲಿಕಿಲೆ, ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ, ಸಂಜು ಕಾಳೇಕರ್, ಬಸವರಾಜ ಕೋರಕೆ, ಶಿವಕುಮಾರ ಬಿರಾದಾರ, ಎಸ್.ಪಿ. ಬಿರಾದಾರ ಇತರರಿದ್ದರು.
ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕರಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ ಸ್ವಾಗತಿಸಿದರು. ಶಿವಶಂಕರ ತರನಳ್ಳಿ ವಂದಿಸಿದರು. ಅಮರಯ್ಯ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net