

ಹಾಸನ: ಯುವಪೀಳಿಗೆಯು ಮೌಢ್ಯತೆಯಿಂದ ಹೊರಬಂದು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಜ.ಹೊ.ನಾ ಅವರ ಪುತ್ರಿ ಜ.ನಾ.ತೇಜಶ್ರೀ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ.ಹೊ.ನಾ. ಅವರ ಬರಹ ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಯಾವುದೇ ಆದರ್ಶ ಹಾಗೂ ಚಿಂತನೆಗಳನ್ನು ಹೊಂದದೆ ಇತ್ತೀಚಿನ ಯುವಪೀಳಿಗೆ ಶಾಪಗ್ರಸ್ತ ಪೀಳಿಗೆಯಾದಂತಾಗಿದೆ ಎಂದು ಬೇಸರವ್ಯಕ್ತಪಡಿಸಿದ ಅವರು, ಯುವಪೀಳಿಗೆಯಲ್ಲಿ ವೈಚಾರಿಕ ಚಿಂತನೆಗಳಿಲ್ಲದೇ ಕೇವಲ ಹಣ ಮಾಡುವ ಚಿಂತನೆ ಮತ್ತು ಮೊಬೈಲ್ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ತ್ಯಾಗದ ಪರಿಕಲ್ಪನೆಯೇ ಗೊತ್ತಿಲ್ಲದಂತಹ ಕಾಲಕ್ಕೆ ನಾವು ಬಂದು ನಿಂತ್ತಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಲೆ, ಸಾಹಿತ್ಯದ ಮೂಲಕ ನಮ್ಮ ಭಾವಗಳನ್ನು ಹದ ಮಾಡಿಕೊಳ್ಳುವುದನ್ನು ಮರೆತುಬಿಟ್ಟಿದ್ದೇವೆ. ಕಲೆ ಮತ್ತು ಸಾಹಿತ್ಯದಿಂದ ದೂರ ಉಳಿಯುವ ಮೂಲಕ ನಮ್ಮಲ್ಲಿ ಚಿಂತನೆಗಳು ಇಲ್ಲವಾದಂತಾಗಿದೆ. ಇದರಿಂದ ಸಮಾಜದಲ್ಲಿ ಕಲಹಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳೆ ಸಾಹಿತ್ಯದ ಬಗ್ಗೆ ಗಂಭೀರವಾದಂತಹ ಆಲೋಚನೆಗಳನ್ನು ಹೊಂದಬೇಕು. ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರ ಚಿಂತನೆಯನ್ನು ಒಪ್ಪಿಕೊಂಡು ಸಾಕಷ್ಟು ಮಂದಿ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದರೆ, ಇನ್ನ ಸಾಕಷ್ಟು ಮಂದಿ ಅವರ ಚಿಂತನೆಯನ್ನು ಪ್ರಶ್ನಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬಂದು ಕೊಡುಗೆಯನ್ನು ಕೊಟ್ಟಿದ್ದಾರೆ. ಕುವೆಂಪು ಅವರ ಚಿಂತನೆಯನ್ನು ಒಪ್ಪಿಕೊಂಡು ಬಂದಂತಹ ವ್ಯಕ್ತಿಗಳ ಪೈಕಿ ಜ.ಹೊ.ನಾರಾಯಣಸ್ವಾಮಿ ಅವರು ಕೂಡ ಒಬ್ಬರಾಗಿದ್ದಾರೆ. ಇವರು ಮೌಢ್ಯತೆಯನ್ನು ದಿಟ್ಟವಾಗಿ ಪ್ರಶ್ನೆ ಮಾಡುವ ಗಟ್ಟಿ ಎದೆಗಾರಿಕೆಯನ್ನು ಹೊಂದಿದ್ದಂತವರು. ಹೀಗಾಗಿ ನೀವು ಕೂಡ ಮೌಢ್ಯತೆಯನ್ನು ಪ್ರಶ್ನಿಸುವ ಮನೋಭಾವವನ್ನು ಹೊಂದಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಲೇಖಕಿ ಸುಶೀಲಾ ಸೋಮಶೇಖರ್ ಅವರು ಜ.ಹೊ.ನಾ ಅವರ ಬದುಕು ಬರಹ, ಸಾಹಿತಿ ಹುಲ್ಲೇನಹಳ್ಳಿ ರಾಜೇಶ್ವರಿ ಅವರು ವಿವೇಕಾನಂದರ ವೈಚಾರಿಕತೆ ಕುರಿತು ಜ.ಹೊ.ನಾ ಅವರ ಚಿಂತನೆಗಳು, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಅಪ್ಪಾಜಿ ಗೌಡ.ಟ.ಎಚ್. ಅವರು ಜ.ಹೊ.ನಾ ಅವರ ಅದಮ್ಯ ಕೃತಿಯ ಕುರಿತು ವಿಷಯವನ್ನು ಮಂಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಿಲ್ಪಶ್ರೀ, ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಎಚ್.ರಾಮೇಗೌಡ, ಸಹಾಯಕ ಪ್ರಾಧ್ಯಾಪಕ ಎಚ್.ಕೆ.ವೆಂಕಟೇಶ್, ಐಕ್ಯೂಎಸ್‌ಇ ಸಂಚಾಲಕ ಎಸ್. ಯೋಗೇಶ್ ಹಾಗೂ ಇತರರು ಇದ್ದರು.