

ಅಥಣಿ: ದೈನಂದಿನ ಬದುಕಿನಲ್ಲಿರುವ ಜಾನಪದ ಸಾಹಿತ್ಯ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಾಹಿತಿ ಡಾ.ಸಿದ್ದಣ್ಣ ಉತ್ನಾಳ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ ಕುರಿತ ವಿಷಯದ ಕುರಿತು ಮಾತನಾಡಿದ ಅವರು, ಭಾರತೀಯರಿಂದ ಬೆಳೆದ ಜಾನಪದ ಸಾಹಿತ್ಯ ಅತ್ಯಮೂಲ್ಯವಾದದ್ದು. ಜಾನಪದ ಉಳಿಸಿ ಬೆಳೆಸುವುದು ಅವಶ್ಯ ಎಂದರು.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯೆ ರಾಧಾಬಾಯಿ ಮಾದರ ಮಾತನಾಡಿ, ಹಿರಿಯರು ಜಾನಪದ ಸಾಹಿತ್ಯವನ್ನು ಅನಾದಿ ಕಾಲದಿಂದ ಉಳಿಸಿಕೊಂಡು ಬಂದು ಪ್ರಚುರಪಡಿಸಿದ್ದಾರೆ. ಯುವಜನಾಂಗ ಇದನ್ನು ಅರಿತುಕೊಳ್ಳಬೇಕು ಎಂದರು.
ಪ್ರಾಚಾರ್ಯ ಬಿ.ಎಸ್.ಕಾಂಬಳೆ ಮಾತನಾಡಿ, ಜನಪದರು ದೈನಂದಿನ ಜೀವನದ ಕಷ್ಟ, ಸುಖಗಳನ್ನು ಜನಪದ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ, ಇಂದು ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಗೀಗೀ ಪದ, ಸೋಬಾನಪದ ಮತ್ತಿತರರ ಗೀತೆಗಳು ಇಂದಿಗೂ ಪ್ರತಿ ಶುಭ ಮಂಗಳ ಕಾರ್ಯದಲ್ಲಿ ಪ್ರಚಲಿತದಲ್ಲಿವೆ ಎಂದರು.
ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರು ಡಾ.ಭಾರತಿ ಎಸ್.ಗದ್ದಿ, ದಿವ್ಯಾ ಶೇಗುಣಸಿ, ಡಾ.ಬಿ.ಎಂ.ಹಿರೇಮಠ, ಶಂಭುಲಿಂಗ ಮಮದಾಪೂರ, ಎಂ.ಜಿ.ಕನಶೆಟ್ಟಿ, ಎಸ್.ಎನ್.ತಳವಾರ, ಹರ್ಷದ ಬನಸೋಡೆ, ರೂಪಾ ಕಲ್ಯಾಣಿ, ಜ್ಯೋತಿಬಾ ಜಾಧವ, ಪೂಜಾ ಹೊಸಗೌಡರ ಇತರರಿದ್ದರು.