ಯುವಪೀಳಿಗೆಗೆ ಉತ್ತಮ ವಾತಾವರಣ ಸೃಷ್ಟಿಸಿ

sri gida
ಕಿಗ್ಗಾ ಪ್ರಾಥಮಿಕ ಶಾಲಾ ಆವರಣದಲ್ಲಿ ಮಠದ ಹಿರಿಯ ಅಧಿಕಾರಿ ಶಿವಶಂಕರ್ ಭಟ್ ಹಣ್ಣಿನ ಗಿಡ ನೆಟ್ಟರು. ರಂಜಿತ್, ಗಿರೀಶ್, ಅಶ್ವಿನ್ ಇತರರಿದ್ದರು.
Published on

ಶೃಂಗೇರಿ: ಪರಿಸರ ಸಂರಕ್ಷಣೆ ಎಲ್ಲರ ಆದ್ಯಕರ್ತವ್ಯ. ಮುಂದಿನ ಯುವ ಪೀಳಿಗೆಗಾಗಿ ನಾವೆಲ್ಲರೂ ಗಿಡಗಳನ್ನು ನೆಡುವ ಮೂಲಕ ಉತ್ತಮ ವಾತಾವರಣ ಕಾಪಾಡುವ ಹೊಣೆಗಾರಿಕೆ ಇದೆ ಎಂದು ಶೃಂಗೇರಿ ಶ್ರೀ ಶಾರದಾ ಮಠದ ಹಿರಿಯ ಅಧಿಕಾರಿ ಶಿವಶಂಕರ್ ಭಟ್ ಹೇಳಿದರು.

ಶುಕ್ರವಾರ ಹಿರಿಯ ಶ್ರೀಗಳ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸದ್ಭಕ್ತ ಯುವಕ ಸಂಘ ಹಾಗೂ ಗ್ರಾಮಭಾರತ್ ವೇದಿಕೆ ಟ್ರಸ್ಟ್‌ನಿಂದ ಹಮ್ಮಿಕೊಂಡಿರುವ ಸುವರ್ಣಭಾರತೀ ಯೋಜನೆಯಡಿ ಕಿಗ್ಗಾ ಪ್ರಾಥಮಿಕ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ತಾಲೂಕಿನ ಹಲವು ಶಾಲೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರದ ಕುರಿತು ಅತ್ಯಂತ ಕಾಳಜಿ ಇರುವ ಹಿರಿಯ ಶ್ರೀಗಳ ಸನ್ಯಾಸ ಸ್ವೀಕಾರದ ಸುವರ್ಣಮಹೋತ್ಸವ ಸಂದರ್ಭದಲ್ಲಿ ಎರಡು ಸಂಸ್ಥೆಯ ಯುವಕರು ಸಲ್ಲಿಸುತ್ತಿರುವ ಸೇವೆ ಮಾದರಿಯಾಗಲಿ ಎಂದು ಹೇಳಿದರು.

ಗ್ರಾಮಭಾರತ್ ವೇದಿಕೆ ಟ್ರಸ್ಟ್ ಪ್ರಧಾನಕಾರ್ಯದರ್ಶಿ ರಂಜಿತ್ ಶೃಂಗೇರಿ ಅವರು ಗ್ರಾಮಭಾರತ್ ವೇದಿಕೆಯಿಂದ ರೈತರು, ಸೈನಿಕರು, ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪ್ರಸ್ತುತ ಸುವರ್ಣಭಾರತೀ ಯೋಜನೆಯಡಿ ಕಾಂಚೀನಗರ, ವಿದ್ಯಾನಗರ, ಕೆಳಕೊಪ್ಪ, ಸಿಂಧುವಳ್ಳಿ, ಕಾವಡಿ ಪ್ರಾಥಮಿಕ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಹಾಗೂ ತೊರೆಹಡ್ಲು ಪ್ರೌಢಶಾಲೆಗೆ ಗಿಡಗಳನ್ನು ವಿತರಿಸಲಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ನಮ್ಮದಾಗಿದೆ. ಮುಂದೆಯೂ ಸುವರ್ಣಭಾರತೀ ಯೋಜನೆಯಡಿ ತಿಂಗಳಿಗೊಂದು ವಿಶೇಷ ಸೇವಾಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು.

120ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಹಂಚಲಿ ರಾಘವೇಂದ್ರ, ಸಮಾಜ ಸೇವಾಕರ್ತರಾದ ಗಿರೀಶ್ ಉಳುವೆ, ಅಶ್ವಿನ್, ಆಶೀಶ್, ಪ್ರಜ್ವಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net