ಯುವಪೀಳಿಗೆ ರಾಜಕೀಯ ಕ್ಷೇತ್ರಕ್ಕೆ ಬರಬೇಕು

IMG_20201111_135622
Published on

ಗೌರಿಬಿದನೂರು : ಯುವಕರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದಾಗ ನಿರೀಕ್ಷಿತ ಬದಲಾವಣೆ ತರಬಹುದು ಎಂದು ಉದ್ಯಮಿ ಕೆ. ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.

ತಾಲೂಕಿನ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಪದಾಧಿಕಾರಿಗಳನ್ನು ತಮ್ಮ ಬಣಕ್ಕೆ ಸ್ವಾಗತಿಸಿ ಮಾತನಾಡಿ, ಯುವ ಶಕ್ತಿಯೇ ದೇಶದ ಪ್ರಮುಖ ಆಸ್ತಿ. ಯುವಕರು ಕೇವಲ ಉದ್ಯೋಗಕ್ಕೋಸ್ಕರ ಶಿಕ್ಷಣ ಪಡೆಯಬಾರದು. ರಾಜಕೀಯ ಪ್ರವೇಶಿಸಿ ದೇಶ ಸೇವೆ ಸಲ್ಲಿಸಲು ಉತ್ತಮ ಅವಕಾಶವಿದೆ. ಗ್ರಾಮೀಣ ಮಟ್ಟದಿಂದ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ತಮ್ಮ ಬಣದಿಂದ ಕ್ರಿಯಾಶೀಲ ಹಾಗೂ ಜನಸೇವೆಯಲ್ಲಿ ಆಸಕ್ತಿ ಇರುವ ಯುವಕರನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು.

ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ತಾಲೂಕಿನ ರಾಜಕೀಯ ಪರಿಸ್ಥಿತಿ ಹಾಗೂ ಜನತೆಯ ಆಶಯದಂತೆ ರಾಜಕೀಯಕ್ಕೆ ಬಂದಿದ್ದೇನೆ. ಜನರ ಒತ್ತಾಯದ ಮೇರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಗೌರಿಬಿದನೂರು ರಾಜಧಾನಿ ಬೆಂಗಳೂರಿಗೆ ಸಮೀಪವಿದ್ದರೂ ಅಭಿವೃದ್ಧಿಯಲ್ಲಿ ಕಡೆಗಣಿಸಲ್ಪಟ್ಟಿದೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆ. ಆದ್ದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತೇವೆ ಎಂದು ತಿಳಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಪಿ. ವಿ. ರಾಘವೇಂದ್ರ ಹನುಮಾನ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಬಳಸಿಕೊಳ್ಳಲಾಗುತ್ತದೆ. ಬಳಿಕ ಶೋಷಣೆ ಮಾಡಲಾಗುತ್ತದೆ. ಆದರೆ ಈಗ ಜನ ಎಚ್ಚೆತ್ತುಕೊಂಡಿದ್ದಾರೆ. ತಾಲೂಕಿನಲ್ಲಿ ದಶಕಗಳಿಂದ ಆಗುತ್ತಿರುವ ರಾಜಕೀಯ ಶೋಷಣೆ, ಸಾಮಾಜಿಕ ಅನ್ಯಾಯ, ದಲಿತ ಹಿಂದುಳಿದವರ ಕಡೆಗಣನೆಯಿಂದ ಮತದಾರರು ಬೇಸತ್ತಿದ್ದಾರೆ.ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪುಟ್ಟಸ್ವಾಮಿ ಗೌಡರ ಬಣವನ್ನು ಬೆಂಬಲಿಸಿ ಹೊಸ ರಾಜಕೀಯಕ್ಕೆ ನಾಂದಿ ಹಾಡಲು ಎಲ್ಲ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಯುವ ಸೇನೆ ಅಧ್ಯಕ್ಷ ನಾಗರಾಜ್, ರಾಧಾಕೃಷ್ಣ, ಕೆ. ವೆಂಕಟೇಶಪ್ಪ, ಇ. ಮಂಜುನಾಥ್, ರಂಗನಾಥ್,ಸಿದ್ದಪ್ಪ, ಹನುಮಂತು, ಎಸ್.ರವಿ, ತಿಮ್ಮೇಗೌಡ, ರಂಜಿತ್ ಸೇರಿ ಮತ್ತಿತರರು ಪುಟ್ಟಸ್ವಾಮಿ ಗೌಡ ಬಣಕ್ಕೆ ಸೇರ್ಪಡೆಯಾದರು.

ಮುಖಂಡರಾದ ಕೆ.ಎಸ್.ಅನಂತರಾಜು, ಶ್ರೀನಿವಾಸಗೌಡ, ನಾಗಸಂದ್ರ ಶ್ರೀನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net