

ಮೊಳಕಾಲ್ಮೂರು: ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗದೆ ಸದ್ಗುಣ ಸಂಪನ್ನತೆಯಿಂದ ಉತ್ತಮ ನಾಗರೀಕರಾಗಿ ಸಮಾಜ ಕಟ್ಟುವ ಪ್ರತಿಭೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಚಿತ್ತರಗಿ ಇಳಕಲ್ ಮಠದ ಶ್ರೀ ಮಹಾಂತ ಸ್ವಾಮೀಜಿ ಜನ್ಮದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಮಾತನಾಡಿ, ಯುವ ಸಮೂಹಕ್ಕೆ ಪ್ರಸ್ತುತ ಜೀವನದ ದಾರಿ ಹಾಗೂ ಮಾನವೀಯ ಸಂಸ್ಕಾರದ ಅರಿವಿನ ಕೊರತೆ ಹೆಚ್ಚಾಗಿರುವುದು ಆತಂಕಕಾರಿ ಎಂದರು.
ಗುರುಕುಲದಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಣದ ಜ್ಞಾನ ತುಂಬುವ ಜತೆಗೆ ಪರಿಶುದ್ಧ ಜೀವನದ ಮೌಲ್ಯವನ್ನು ಪಾಲಕರು ಕಲಿಸಬೇಕು. ಡಾ.ಮಹಾಂತ ಸ್ವಾಮೀಜಿ ಜನರಲ್ಲಿರುವ ದುರಭ್ಯಾಸಗಳನ್ನ ಬಿಡಿಸಲು ಪಣ ತೊಟ್ಟಿದ್ದರು. ಅವರ ಸನ್ಮಾರ್ಗದ ನಡೆ ಭವಿಷ್ಯತ್ತಿನ ಸಾರ್ಥಕ ಜೀವನಕ್ಕೆ ಬುನಾದಿಯಾಗಿದೆ ಎಂದು ತಿಳಿಸಿದರು.
ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರ ಆಶಯದಂತೆ ಡಾ.ಮಹಾಂತ ಗುರುಗಳು ಜಾತ್ಯತೀತ ನಿಲುವಿನ ಬದ್ಧತೆ ಮೆರೆಯುತ್ತ ಮಾನವ ಜಾತಿ ಒಂದೇ ಎಂದು ಜಗತ್ತಿಗೆ ಸಾರಿದರು. ಸಮಾಜದಲ್ಲಿನ ಅಜ್ಞಾನ, ಅನಾಗರೀಕತೆ ಹಾಗೂ ವ್ಯಸನ ಬಿಡಿಸುವ ಮಹತ್ತರ ಕಾರ್ಯವನ್ನು ಮಾಡಿದರು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಬಿಇಒ ಜಯಲಕ್ಷ್ಮೀ, ಪಪಂ ಮುಖ್ಯಾಧಿಕಾರಿ ಈ. ಲೀಲಾವತಿ, ಪ್ರಾಚಾರ್ಯ ಗೋವಿಂದಪ್ಪ, ಪಿಎಸ್‌ಐ ಪಾಂಡುರಂಗಪ್ಪ, ಕಸಾಪ ತಾಲೂಕು ಅಧ್ಯಕ್ಷ ಜಿಂಕಾ ಶ್ರೀನಿವಾಸ, ಇಸಿಒ ಓಂಕಾರಪ್ಪ, ಮೋಹನ್, ವಾಂಜ್ರೆ ರಮೇಶ್, ಕಾಂತರಾಜ್, ಬಸಣ್ಣ, ವಿನಯ್, ರವಿಕುಮಾರ ಇತರರಿದ್ದರು.
ಸಮಾಜದ ಎಲ್ಲರಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಪರಿಕಲ್ಪನೆ ಸರ್ಕಾರದ್ದಾಗಿದೆ. ಇದು ಸಕಾರವಾಗಲು ವಿದ್ಯಾರ್ಥಿಗಳು ಲಭ್ಯವಿರುವ ಉಚಿತ ಶಿಕ್ಷಣದ ಸವಲತ್ತುಗಳನ್ನ ಬಳಸಿಕೊಂಡು ಸಾಧನೆ ಮಾಡಬೇಕಿದೆ.
ಎಂ.ವಿ.ರೂಪಾ, ತಹಸೀಲ್ದಾರ್