ಯುವನಿಧಿ ಸ್ವಾವಲಂಬಿ ಜೀವನಕ್ಕೆ ನೆರವು

CTD YUVA NIDI----
Published on

ಚಿತ್ರದುರ್ಗ: ಉತ್ತಮ ಭವಿಷ್ಯಕ್ಕಾಗಿ ರೂಪಿಸಿರುವ ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಆರ್. ಶಿವಣ್ಣ ಯುವಜನರಿಗೆ ಸಲಹೆ ನೀಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಡಿಪ್ಲೊಮಾ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳ ಸ್ವಾವಲಂಬಿ ಜೀವನಕ್ಕೆ ಯುವನಿಧಿ ನೆರವಾಗಲಿದೆ. ಯುವನಿಧಿ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಪುಸ್ತಕ ಖರೀದಿಗೆ ಉಪಯೋಗವಾಗಲಿದೆ. ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1500 ರೂ. ಕೊಡಲಾಗುತ್ತದೆ ಎಂದರು.

ಜಿಲ್ಲಾ ಉದ್ಯೋಗಾಧಿಕಾರಿ ಡಿ. ರವೀಂದ್ರ ಮಾತನಾಡಿ, ಪದವಿ ಬಳಿಕ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜ.20 ರವರೆಗೆ ಯುವನಿಧಿ ಯೋಜನೆಗೆ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಜಿಲ್ಲೆಯಲ್ಲಿ 4,714 ಫಲಾನುಭವಿಗಳಿದ್ದು, 2024ರ ಜನವರಿಯಿಂದ ನವೆಂಬರ್‌ವರೆಗೆ 6.77ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದರು. ಸಮಿತಿ ಮತ್ತೊಬ್ಬ ಉಪಾಧ್ಯಕ್ಷ ಅಬ್ದುಲ್, ಹಿರಿಯೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಖಾದಿ ಜೆ. ರಮೇಶ್, ಸದಸ್ಯ ಮುದಾಸರ್ ನವಾಜ್, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ರಾಘವೇಂದ್ರಚಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ರವಿಕುಮಾರ್, ನಾಗರಾಜ್ ಇತರರು ಇದ್ದರು. ಈ ವೇಳೆ ಯೋಜನೆ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net