ಯುವನಿಧಿ ಯೋಜನೆ: ಆನ್ ಲೈನ್ ಮೂಲಕ ನೋಂದಣಿಗೆ ಕ್ರಮವಹಿಸಲು ಡಿಸಿ ಸೂಚನೆ

ಯುವನಿಧಿ ಯೋಜನೆ: ಆನ್ ಲೈನ್ ಮೂಲಕ ನೋಂದಣಿಗೆ ಕ್ರಮವಹಿಸಲು ಡಿಸಿ ಸೂಚನೆ
Published on

ಹಾಸನ: ಸರ್ಕಾರದ ಮಹತ್ವಾಂಕಾಂಕ್ಷಿ ಯುವನಿಧಿ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ 2022-23 ಸಾಲಿನಲ್ಲಿ ತೇರ್ಗಡೆಯಾಗಿರುವ ನಿರುದ್ಯೋಗಿ ಪದವಿದರರು ಹಾಗೂ ಡಿಪ್ಲೊಮೋ ಪಾಸ್ ಆದವರು ಆನ್ ಲೈನ್ ಮೂಲಕ ನೋಂದಣಿ ಮಾಡಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಯುವನಿಧಿ ನೋಂದಣಿ ಕುರಿತಂತೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿರುವ 55 ಪದವಿ ಕಾಲೇಜುಗಳು, 6 ಇಂಜಿನಿಯರಿಂಗ್ ಕಾಲೇಜುಗಳು ಹಾಗೂ 8 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 2022-23 ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿರುತ್ತದೆ ಅವರಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿಕೊಂಡಿರುವವರು, ಸ್ವಯಂ ಉದ್ಯೋಗ ಮಾಡದಿರುವವರನ್ನು ಹಾಗೂ ಇತರೆ ಕಡೆಗಳಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಜೊತೆಗೆ ನಿರುದ್ಯೋಗಿಗಳಾಗಿರುವ ಯುವಜನತೆ ಪಟ್ಟಿಯನ್ನು 3 ದಿನದೊಳಗೆ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಪ್ರಾಂಶುಪಾಲರುಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿ 2022-23 ಸಾಲಿನಲ್ಲಿ ತೇರ್ಗಡೆಯಾದ ಒಟ್ಟು 8424 ಯುವಜನರಿದ್ದು, ಇದುವರೆಗೆ 1137 ಮಂದಿ ಮಾತ್ರ ನೋಂದಣಿ ಮಾಡಿಸಿದ್ದಾರೆ. ಅರ್ಹರನ್ನು ನೋಂದಣಿ ಮಾಡಿಸುವುದರ ಮೂಲಕ ಯೋಜನೆಯ ಪ್ರಯೋಜನಾ ಪಡೆಯುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಡಿಸಿ ತಿಳಿಸಿದರು.
ಜ.12 ರಂದು ಯುವನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ. ನೋಂದಣಿಯಾದ ಪದವಿ ಅಭ್ಯರ್ಥಿಗಳಿಗೆ 3000 ಹಾಗೂ ಡಿಪ್ಲೊಮೋ ಪಾಸ್ ಆದವರಿಗೆ 1500 ರೂಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾಣೆ ಮೂಲಕ ಜಮೆ ಆಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಿ.ಎಚ್.ಶಿವಕುಮಾರ್, ಸಹಾಯಕ ನಿರ್ದೇಶಕ ಕೃಷ್ಣೇಗೌಡ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net