

ಹಾಸನ: ಯುವತಿಯರು ಹದಿಹರೆಯದ ವಯಸ್ಸಿನಲ್ಲಿ ಜಾಗೃತೆಯಿಂದ ಇರುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ವೈದ್ಯೆ ಹಾಗೂ ರೋಟರಿ ಜೋನ್ 9ರ ಸಹಾಯಕ ಗೌವರ್ನರ್ ಡಾ. ಪ್ರೀತಿ ಮೋಹನ್ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬನ್ ಘಟಕ, ಎನ್‌ಎಸ್‌ಎಸ್ ಘಟಕ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಕರು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಆರೋಗ್ಯದ ಬಗ್ಗೆಯು ಕಾಳಜಿ ಹೊಂದಬೇಕು. ಬದಲಾದ ಆಹಾರ ಪದ್ಧತಿಯಿಂದ ಇಂದು ಮನುಷ್ಯನಿಗೆ ಅನೇಕ ಕಾಯಿಲೆಗಳು ಹರಡುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ವಿವಿಧ ಕಾಯಿಲೆಗಳು ಯುವಕ-ಯುವತಿಯರಿಗೆ ಹರಡುತ್ತಿದೆ. ಬಹು ಮುಖ್ಯವಾಗಿ ಹೆಣ್ಣು ಮಕ್ಕಳು ಇಂದು ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗಿದೆ. ಬಹು ಮುಖ್ಯವಾಗಿ ಹದಿ ಹರಯದ ವಯಸ್ಸಿನಲ್ಲಿ ಎಚ್ಚರಿಕೆಯಿಂದ ಹಾಗೂ ಮುಂಜಾಗೃತ ಕ್ರಮಗಳನ್ನು ಪಾಲನೆ ಮಾಡಬೇಕಾದ ಅವಶ್ಯಕತೆ ಇದೆ. ಹೆಣ್ಣು ಮಕ್ಕಳು ಹೆಚ್ಚಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ತಾವು ಸೇವಿಸುವ ಆಹಾರ, ವಸ್ತ್ರ ಹೀಗೆ ಎಲ್ಲಾ ಹಂತದಲ್ಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಕ್ಯೂಎಸಿ ಸಂಚಾಲಕ ಎಸ್. ಯೋಗೇಶ್ ಮಾತನಾಡಿ, ಮನೆಯಲ್ಲಿ ದೊರೆಯುವ ಗುಣಮಟ್ಟದ ಆಹಾರವನ್ನು ಬಿಟ್ಟು ಯುವಕರು ಇತರೆ ಆಹಾರ ಪದ್ಧತಿಗೆ ಇಂದು ಒಗ್ಗಿಕೊಳ್ಳುವುತ್ತಿರುವುದರಿಂದ ಕಾಯಿಲೆಗಳು ಬೇಗ ಹರಡಲು ಕಾರಣವಾಗುತ್ತಿದೆ. ಹೆಣ್ಣು ಮಕ್ಕಳು ವಿಶೇಷವಾಗಿ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮನೆಯಲ್ಲಿ ಪೋಷಕರು ತಿಳಿಸುವ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ. ಕೃಷ್ಣೇಗೌಡ ಮಾತನಾಡಿ, ಯುವತಿಯರು ವಿದ್ಯಾಭ್ಯಾಸದ ಅವಧಿಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಪುರುಷರಿಗಿಂತ ಮಹಿಳೆಯರಿಗೆ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿ ಹೆಚ್ಚಾಗಿ ಇರುತ್ತದೆ. ಪದವಿ ಹಂತಕ್ಕೆ ಬಂದ ಯುವತಿಯರು ಬದಲಾದ ಇಂದಿನ ಆಹಾರ ಪದ್ಧತಿಗೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದಾರೆ, ಇದರಿಂದ ಅನೇಕ ವಿವಿಧ ಮಾದರಿಯ ಕಾಯಿಲೆಗಳನ್ನು ಎದರುಸಿಬೇಕಾಗಿದೆ. ಈ ಹಂತದಲ್ಲಿ ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಡಾ. ವಿಕ್ರಂ, ಎನ್‌ಎಸ್‌ಎಸ್ ಹಾಗೂ ರೆಡ್ ರಿಬನ್ ಘಟಕದ ಸಂಚಾಲಕ ಯೋಗೇಶ್ ಇತರರು ಇದ್ದರು.