ಯುವತಿಗೆ ಡ್ರಾಪ್ ದೂರು-ಪ್ರತಿದೂರು ದಾಖಲು

crime logo
Published on

ಚಿತ್ರದುರ್ಗ: ನಗರದ ಬಟ್ಟೆ ಅಂಗಡಿಯೊಂದರಲ್ಲಿ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅನ್ಯ ಕೋಮಿನ ಯುವತಿಗೆ ಡ್ರಾಪ್ ನೀಡಿದ ಯುವಕನ ಮೇಲೆ ಗುಂಪೊಂದು ಗುರುವಾರ ರಾತ್ರಿ ಹಲ್ಲೆ ನಡೆಸಿದ್ದು, ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಡರಾತ್ರಿ ಇದೇ ಠಾಣೆಯಲ್ಲಿ ಯುವಕನ ವಿರುದ್ಧ ಯುವತಿ ಕೂಡ ಕಿರುಕುಳದ ಪ್ರತಿದೂರು ದಾಖಲಿಸಿದ್ದಾರೆ. ಕನಕ ವೃತ್ತದವರೆಗೂ ಡ್ರಾಪ್ ನೀಡುವುದಾಗಿ ಹೇಳಿ, ಅಲ್ಲಿ ನಿಲ್ಲಿಸದೇ ಅಸಭ್ಯವಾಗಿ ವರ್ತಿಸಿದರು. ಆತಂಕಗೊಂಡು ಕೂಗಿದಾಗ ಸಮೀಪದಲ್ಲಿದ್ದ ಅಣ್ಣನ ಸ್ನೇಹಿತರು ನೆರವಿಗೆ ಧಾವಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಲ್ಲೆಗೆ ಒಳಗಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಯುವಕನೇ ಈರಜ್ಜನಹಟ್ಟಿಯ ಉಮೇಶ್. ವಿಷಯ ತಿಳಿದ ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ, ಪುತ್ರ ಉಮೇಶ್ ಕಾರಜೋಳ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸಂಘ ಪರಿವಾರದ ಕಾರ್ಯಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಕೂಡ ಭೇಟಿ ನೀಡಿ ಪರಿಶೀಲಿಸಿದರು.

ಒಂದೇ ಅಂಗಡಿಯಲ್ಲಿ ಯುವಕ-ಯುವತಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯ ಡ್ರಾಪ್ ನೀಡುವುದಾಗಿ ಹೇಳಿ ಉಮೇಶ್ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೊಳಲ್ಕೆರೆ ರಸ್ತೆಯಲ್ಲಿ ಸಾಗುವ ವೇಳೆ ಅಡ್ಡಗಟ್ಟಿದ ಗುಂಪೊಂದು ಹಲ್ಲೆ ನಡೆಸಿದೆ. ಗಾಯಗೊಂಡಿದ್ದ ಆತನನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕ ಉಮೇಶನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net