

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರಿಂದ ಜ. 12ರಂದು ಇಲ್ಲಿನ ರೈಲ್ವೆ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿರುವ ಯುವ ಜನೋತ್ಸವದ ಪೂರ್ವ ಸಿದ್ಧತೆಗಳನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಪರಿಶೀಲಿಸಿದರು.
ಕಾರ್ಯಕ್ರಮದ ವೇದಿಕೆ, ಮೈದಾನದಲ್ಲಿ ಹಾಕುತ್ತಿರುವ ಟೆಂಟ್ಗಳನ್ನು ಪರಿಶೀಲಿಸಿದ ಶೆಟ್ಟರ್, ಒಂದೇ ಪ್ರವೇಶ ದ್ವಾರ ಮಾಡುವ ಬದಲು ಮೂರ್ನಾಲ್ಕು ಪ್ರವೇಶದ್ವಾರಗಳ ಮೂಲಕ ಯುವಕರನ್ನು ಮೈದಾನದೊಳಗೆ ಬಿಡುವಂತೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಹಾಜರಾಗಲು ನೋಂದಣಿ ಮಾಡಿಕೊಂಡ ಎಲ್ಲ ಯುವಕರು ನಿಗದಿತ ಅವಧಿಯಲ್ಲಿ ಮೈದಾನದೊಳಗೆ ಇರಬೇಕು. ಗದ್ದಲದ ಕಾರಣದಿಂದ ಯಾವೊಬ್ಬ ಯುವಕನೂ ಮೈದಾನದ ಹೊರಗೆ ಉಳಿಯಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಪೊಲೀಸ್ ಆಯುಕ್ತ ರಮಣ ಗುಪ್ತಾ, ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ರೈಲ್ವೆ ಅಧಿಕಾರಿಗಳು ಹಾಗೂ ಮತ್ತಿತರರು ಇದ್ದರು.
ಮೈದಾನದಲ್ಲಿ ಟೆಂಟ್ ಅಳವಡಿಸುವ ಕಾರ್ಯ ಭರದಿಂದ ನಡೆದಿದೆ. ಅಂದಾಜು 25 ರಿಂದ 30 ಸಾವಿರ ಆಸನಗಳನ್ನು ಹಾಕಲಾಗುತ್ತಿದೆ. ಮೈದಾನದ ಸುತ್ತಲೂ ಪೊಲೀಸ್ ಭದ್ರತೆ ಅಳವಡಿಸಲಾಗಿದೆ. ಪ್ರಧಾನಿ ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಭಾನುವಾರ ರಾತ್ರಿಯೇ ಎಸ್ಪಿಜಿಯ ಒಂದು ತಂಡ ಹುಬ್ಬಳ್ಳಿಗೆ ಆಗಮಿಸಿದ್ದು, ಸೋಮವಾರ ಮೈದಾನದಲ್ಲಿ ಭದ್ರತೆ ಕುರಿತು ಪರಿಶೀಲನೆ ನಡೆಸಲಿದೆ.