ಮಡಿಕೇರಿ : ಆರೋಗ್ಯವಂಥ ವ್ಯಕ್ತಿ ರಕ್ತದಾನ ಮಾಡುವುದರಿಂದ ಉತ್ತಮ ರಕ್ತ ಉತ್ಪತ್ತಿಯಾಗುತ್ತದೆ. ಜತೆಗೆ ರಕ್ತನಿಧಿ ಕೇಂದ್ರಗಳಲ್ಲಿ ಕೊರತೆ ನಿವಾರಣೆಯಾಗುತ್ತದೆ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಅಭಿಪ್ರಾಯಪಟ್ಟರು.
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಂಟಿಕೊಪ್ಪ ಜೆ.ಸಿ.ಐ., ಕುಶಾಲನಗರ ಕಾವೇರಿ ಜೆ.ಸಿ.ಐ. ಸಂಸ್ಥೆ, ಲಕ್ಷ್ಮೀನಾರಾಯಣ ವಾಟರ್ ಪಾರ್ಕ್ ಹಾಗೂ ಸ್ಥಳೀಯ ಕಂದಾಯ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ವಿಶ್ವ ರಕ್ತದಾನ ದಿನದ ಪ್ರಯುಕ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಜನರು ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಆರೋಗ್ಯವಂಥ ವ್ಯಕ್ತಿ ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಶರೀರದ ಅಂಗಾಂಗಗಳಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯವಂತನಾಗಲು ಪೂರಕವಾಗುತ್ತದೆ ಎಂದು ಡಾ.ಕರುಂಬಯ್ಯ ತಿಳಿಸಿದರು.
ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್ ಮಾತನಾಡಿ, ರಕ್ತದಾನ ಮತ್ತು ರಕ್ತಗುಂಪು ತಪಾಸಣೆ ಶಿಬಿರವನ್ನು ನಡೆಸುತ್ತಿರುವ ಕಾರ್ಯ ಸಮಾಜಕ್ಕೆ ಹಾಗೂ ಯುವ ಸಮೂಹಕ್ಕೆ ಮಾದರಿ ಎಂದು ಶ್ಲಾಘಿಸಿದರು.
ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಲಹಾ ಸಮಿತಿ ಸದಸ್ಯ ಎಂ.ಡಿ.ರಂಗಸ್ವಾಮಿ ಮಾತನಾಡಿದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸೇರಿ ಒಟ್ಟು 76 ಮಂದಿ ತಲಾ 350 ಯೂನಿಟ್ ರಕ್ತದಾನ ಮಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರಸಾದ್ ಸಾಲ್ಯಾನ್, ಕುಶಾಲನಗರ ಜೇಸಿಸ್ ಕಾವೇರಿ ಸಂಸ್ಥೆಯ ಅಧ್ಯಕ್ಷ ಎಂ.ಜೆ.ರಜನಿಕಾಂತ್ ಮಾತನಾಡಿದರು. ಕೂರ್ಗ್ ವಾಟರ್ ಪಾರ್ಕ್ ನ ಮುಖ್ಯಸ್ಥ ಲಕ್ಷ್ಮೀನಾರಾಯಣ (ನಾಣಿ), ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಕೆ.ಐ.ಪರಶಿವಮೂರ್ತಿ, ಡಾ ರಂಗನಾಥ್, ಡಾ ಚೂಡಾ ರತ್ನಾಕರ್, ಡಾ ನವೀನ್ ಇತರರು ಇದ್ದರು.