ಯುವಜನರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

24-kolr- 5
ಕೋಲಾರದಲ್ಲಿ ಜ್ಞಾಪಕಶಕ್ತಿ ವೃದ್ಧಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಷ ಚಾಲನೆ ನೀಡಿದರು. ಜಿಪಂ ಸಿಇಒ ಪದ್ಮಾಬಸಂತಪ್ಪ, ಶಿಕ್ಷಣ ಉಪನಿರ್ದೇಶಕ ಕೃಷ್ಣಮೂರ್ತಿ ಇತರರು ಇದ್ದರು.
Published on

ಕೋಲಾರ: ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಯುವಜನರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರೇರಣೆ ಹಾಗೂ ಜ್ಞಾಪಕಶಕ್ತಿ ವೃದ್ಧಿ ಕುರಿತಾದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲೆಗಳಲ್ಲಿ ನೀಡುವ ಪಾಠಪ್ರವಚನದ ಜತೆಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಾಗಾರಗಳನ್ನು ಹೆಚ್ಚಾಗಿ ಆಯೋಜಿಸಬೇಕಿದೆ. ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ಕಲೆ ಕರಗತವಾದಲ್ಲಿ ಹೆಚ್ಚಿನ ಅಂಕಗಳಿಲು ಸಾಧ್ಯ ಎಂದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ನಾಗರಿಕರನ್ನಾಗಿ ಮಾಡಬೇಕಿದೆ. ಓದಿದ್ದನ್ನು ಅರ್ಥೈಸಿಕೊಂಡರೆ ಮನದಲ್ಲಿ ಉಳಿಯುತ್ತದೆ. ಗುರಿಹೊಂದಿ ಶಿಕ್ಷಕರ ಸಲಹೆ, ಸೂಚನೆಯನ್ನು ಕಾಲಕಾಲಕ್ಕೆ ಪಡೆದರೆ ಉತ್ತಮ ಫಲಿತಾಂಶ ಪಡೆಯಬಹುದು. ಯಶಸ್ಸು ಸಾಧಿಸಲು ಕಠಿಣ ಶ್ರಮಪಡಬೇಕು. ಕಳೆದೆರಡು ವರ್ಷದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಆರನೇ ಸ್ಥಾನ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೊದಲನೇ ಸ್ಥಾನಕ್ಕೆ ಏರಬೇಕಿದೆ. ಇದಕ್ಕೆ ಪರಿಶ್ರಮವನ್ನು ವಿದ್ಯಾರ್ಥಿಗಳು ಹಾಕಬೇಕು. ಶಿಕ್ಷಕರು ಫಲಿತಾಂಶ ಹೆಚ್ಚಳಕ್ಕೆ ಮತ್ತಷ್ಟು ಕೃಷಿ ಮಾಡಬೇಕು. ಸರ್ಕಾರದಿಂದ ಮಕ್ಕಳು ಮತ್ತು ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಾಗಾರಕ್ಕೆ ಸ್ಥಳಾವಕಾಶ ಕೊರತೆಯಿಂದ ಆಯ್ದ ಸರ್ಕಾರಿ ಶಾಲೆಯ ಮಕ್ಕಳನ್ನು ಕರೆತರುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲು ಜಿಲ್ಲಾಡಳಿತ ಕಾರ್ಯ ಯೋಜನೆಯನ್ನು ರೂಪಿಸಿಕೊಂಡಿದೆ. ಇಂತಹ ಕಾರ್ಯಾಗಾರಗಳ ಪ್ರಯೋಜನವನ್ನು ಜಿಲ್ಲೆಯ ಕಟ್ಟಕಡೆಯ ವಿದ್ಯಾರ್ಥಿಗೂ ತಲುಪಿಸುವುದು. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾಬಸಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕೋರ್ಸ್ಗಳನ್ನಷ್ಟೇ ಅಲ್ಲದೆ ವಿವಿಧ ಕೌಶಲ್ಯಗಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಬೇಕು. ಓದನ್ನು ಇಷ್ಟಪಟ್ಟು ಓದಬೇಕೇ ವಿನಃ ಕಷ್ಟಪಟ್ಟು ಓದಬಾರದು. ಶಿಕ್ಷಕರು ಪಾಠ ಮಾಡಿದ ನಂತರ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ವಿಷಯ ವಿನಿಮಯ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಮತ್ತೆ ಬರುವುದಿಲ್ಲ. ಕಲಿಕೆಯಲ್ಲಿ ಹಿಂದುಳಿದರೆ ಮುಂದೆ ಪರಿತಪಿಸಬೇಕಾಗುತ್ತದೆ. ಬಂಗಾರದಂತಹ ವಿದ್ಯಾರ್ಥಿ ಜೀವನವನ್ನು ಓದಿಗಾಗಿ ಮೀಸಲಿಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ ಉಪನಿರ್ದೇಶಕ ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಅಮೀನ್ ಉದಾಸಿ, ಯಾಕುಬ್ ಕಯ್ಯಾರ್, ಗಣೇಶ್ ಭಟ್, ಗಾಯತ್ರಿ ಸುರೇಶ್, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net