

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಯುವ ಜನತೆ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಕೈಗೊಳ್ಳಬೇಕಾದ ವೃತ್ತಿಯ ಬಗ್ಗೆ ಗೊಂದಲದಲ್ಲಿದ್ದಾರೆ. ಹೀಗಾಗಿ ಅವರಿಗೆ ವೃತ್ತಿ ಮಾರ್ಗದರ್ಶನ ನೀಡುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ತರಬೇತಿ ಇಲಾಖೆ ಮಾರ್ಗದರ್ಶಕ ಸಂಜೀವ್ ಹೇಳಿದರು.
ಸ್ಥಳೀಯ ಸೀತಾ ಸುಬ್ಬರಾಜು ಸ್ಮಾರಕ ಪದವಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕತೆ ಬೆಳೆಯುತ್ತಿದ್ದು ಯುವಜನತೆ ಮೊಬೈಲ್‌ನಲ್ಲಿಯೇ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಶ್ರೀನಿವಾಸ ರಾಯಚೂರಕರ್ ಮಾತನಾಡಿ, ಅರ್ಹತೆ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ಇಲಾಖೆ ವೃತ್ತಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕೆ ಮತ್ತು ತರಬೇತಿ ಇಲಾಖೆ ಉದ್ಯೋಗಾಕಾರಿ ಶ್ರೀನಿವಾಸ ಬಹದ್ದೂರ್ ಮಾತನಾಡಿ, ಇಲಾಖೆ ವತಿಯಿಂದ ನಿರಂತರವಾಗಿ ನಿರುದ್ಯೋಗಿ ಯುವಕರಿಗೆ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಕ್ಷ್ಮಣ ಜಾಲಿಬೆಂಚಿ, ರವಿಕುಮಾರ, ಪಿ.ವೆಂಕಟೇಶ, ನಿರ್ಮಲಾ ಪಾಟೀಲ್, ರಾಜೇಶ್ವರಿ, ಶಾಂತಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.