ಯುವಜನರ ಕೈಯಲ್ಲಿದೆ ಹಿರಿಯರ ಕ್ಷೇಮ

CTD Senior Citizen----
Published on

ಚಿತ್ರದುರ್ಗ: ಜೀವನದಲ್ಲಿ ಕಷ್ಟ ಎದುರಿಸಿ, ಕುಟುಂಬ ಪೋಷಿಸಿ, ಸಮಾಜದಲ್ಲಿ ಉತ್ತಮ ನೆಲೆ ದೊರಕಿಸಿಕೊಟ್ಟ ಹಿರಿಯರನ್ನು ಕ್ಷೇಮವಾಗಿ ನೋಡಿಕೊಳ್ಳುವ ಹೊಣೆ ಯುವಜನರದ್ದಾಗಿದೆ ಎಂದು ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ಹೇಳಿದರು.

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರ ಕ್ಷೇಮ ಮತ್ತು ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೊಜನೆಗಳನ್ನು ಜಾರಿಗೊಳಿಸಿವೆ. ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಅಲ್ಲದೆ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಮಕ್ಕಳಂತೆ ಹಿರಿಯರನ್ನು ಜೋಪಾನ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಹಿರಿಯ ನಾಗರಿಕರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ವಂಚನೆ, ಆಸ್ತಿ ಪಡೆದು ಮನೆಯಿಂದ ಹೊರಹಾಕುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಪಂ, ಗ್ರಾಪಂ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗೆ ಶೇ.03 ರಷ್ಟು ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಎಎಸ್ಪಿ ಶಿವಕುಮಾರ ಮಾತನಾಡಿ, ಹಿರಿಯ ನಾಗರಿಕರು ದೌರ್ಜನ್ಯ, ವಂಚನೆಗೆ ಒಳಗಾದಲ್ಲಿ ಹಿಂಜರಿಯದೆ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕು. ನ್ಯಾಯಾಲಯ ಹಾಗೂ ನಮ್ಮ ಇಲಾಖೆ ದುರ್ಬಲರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತ್ತಿವೆ. ಯಾವುದೇ ತೊಂದರೆಯಾದಲ್ಲಿ ಜಿಲ್ಲಾ ಕಂಟ್ರೋಲ್ ರೂಂ. ಸಂಖ್ಯೆ 9480803100 ಅಥವಾ 9480803102ಕ್ಕೆ ಕರೆ ಮಾಡುವಂತೆ ತಿಳಿಸಿದರು.

ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, ನಮ್ಮ ಯೋಗಕ್ಷೇಮ ಮತ್ತು ನಮ್ಮ ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು ನಾವೆಂಬ ಘೋಷವಾಕ್ಯದೊಂದಿಗೆ 2025ರ ವಿಶ್ವ ಹಿರಿಯ ನಾಗರಿಕರ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು.

ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರನ್ನು ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್‌ಕುಮಾರ್, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಪ್ರೇಮನಾಥ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಆರ್. ರಂಗಪ್ಪರೆಡ್ಡಿ ಇತರರಿದ್ದರು.

(ಸಿಟಿಡಿ ಸಿನಿಯರ್ ಸಿಟಿಜನ್)

ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆರ್. ಶಿವಣ್ಣ ಉದ್ಘಾಟಿಸಿದರು. ಮೆಹಬೂಬ್ ಜಿಲಾನಿ ಖುರೇಷಿ, ಶಿವಕುಮಾರ್, ಡಿ.ಎನ್. ಮೈಲಾರಪ್ಪ, ಜೆ. ವೈಶಾಲಿ, ಡಿ.ಎನ್. ಮೈಲಾರಪ್ಪ, ವಿಜಯ್‌ಕುಮಾರ್, ಬಿ.ಪಿ. ಪ್ರೇಮನಾಥ್, ಆರ್. ರಂಗಪ್ಪರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net