

ಮೈಸೂರು: ಯುವಜನರು ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೆ ಆಂತರಿಕವಾಗಿ ಬುದ್ಧಿ ಮತ್ತು ಮನಸ್ಸನ್ನು ವಿಕಸನಗೊಳಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಹೇಳಿದರು.
ನಗರದ ಸುತ್ತೂರು ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಲಕ್ಕಣ್ಣ ದಂಡೇಶನ ಶಿವತತ್ವ್ವ ಚಿಂತಾಮಣಿ ಕುರಿತ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನರು ಬಾಹ್ಯ ಜೀವನದ ರೋಮಾಂಚನಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಭ್ರಮಾಲೋಕದಿಂದ ಅವರು ಹೊರಬರಬೇಕು. ಮಹನೀಯರ ಪ್ರತಿಮೆ ಸ್ಥಾಪಿಸುವ ಉತ್ಸಾಹವನ್ನು ಅವರ ವಿಚಾರಧಾರೆ ಮನಸ್ಸಿನಲ್ಲಿ ಸ್ಥಾಪಿಸಿಕೊಂಡು ಜೀವನದಲ್ಲಿ ಪಾಲಿಸಬೇಕಾದ ಅಗತ್ಯ ಇದೆ ಎಂದರು.
ಜನರು ಬಿಜ್ಜಳನ ಆಸ್ಥಾನದಲ್ಲಿದ್ದ ರಾಜ ಪೋಷಾಕಿನ ಕುದುರೆಯ ಮೇಲಿರುವ ಬಸವಣ್ಣನವರನ್ನು ವೈಭವೋಪೇತವಾಗಿ ಕಾಣುವ ಬದಲು ಆಧ್ಯಾತ್ಮಿಕ ಮೇರುವಾದ ಬಸವಣ್ಣನವರನ್ನು ಆರಾಧಿಸುವ ಕಡೆ ಗಮನ ಹರಿಸಬೇಕು. ಖಡ್ಗಕ್ಕಿಂತ ಲೇಖನಿ ಹರಿತ ಎಂಬಂತೆ ಬಸವಣ್ಣನವರು ಖಡ್ಗವನ್ನು ತ್ಯಜಿಸಿ ಲೇಖನಿ ಹಿಡಿದು ವಚನ ರಚಿಸಿದರು. ಅದರ ಮೂಲಕ ಅವರು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದರು ಎಂದರು.
ಬಸವಾದಿ ಶರಣರು ಅನುಭವ ಮಂಟಪದಲ್ಲಿ ಆರಂಭಿಸಿದ ದಾರಿಯಲ್ಲಿ ಎಲ್ಲರೂ ಸಾಗಬೇಕು. ಅವರ ಅತ್ಯುತ್ತಮ ಆಲೋಚನೆ ಎಲ್ಲರೂ ಆತ್ಮ ವಿಮರ್ಶೆಗೆ ಒಳಪಡಿಸಿಕೊಂಡು ಬದುಕಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು. ಕನ್ನಡ ಚರಿತ್ರೆಯಲ್ಲಿ ಲಕ್ಕಣ್ಣ ದಂಡೇಶನ ಕಾಲ ಬಹಳ ವಿಶಿಷ್ಟವಾದುದು. ಎರಡು ಸಾವಿರಕ್ಕೂ ಹೆಚ್ಚು ಪದ್ಯ ವಾರ್ಧಕ ಷಟ್ಪದಿಯಲ್ಲಿ ರಚಿಸಿರುವುದು ವಿಶೇಷವಾದ ಸಂಗತಿ. ಶಿವತತ್ವ್ವ ಚಿಂತಾಮಣಿ ಗ್ರಂಥ ಬಸವ ಯುಗದ ನಂತರ ಶೈವ ಮತ್ತು ವೀರಶೈವ ಸಂಸ್ಕೃತಿಯ ಕೊಂಡಿಯಾಗಿದೆ ಎಂದು ತಿಳಿಸಿದರು.
ಸಂಗಮ ಕ್ಷೇತ್ರದ ಶ್ರೀ ಕಾರ್ಯಸ್ವಾಮಿ ಮಠದ ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ, ಆತ್ಮವೆಂಬುದು ನಿತ್ಯ ಪರಿಶುದ್ಧವಾದುದು. ಪರಮಾತ್ಮನೇ ಅಂತಿಮ ಸತ್ಯ. ಇದು ಭಗವಂತನ ಅವ್ಯಕ್ತ ವಾಸ್ತವ ಮತ್ತು ಸತ್ಯ ಸೂಚಿಸುತ್ತದೆ. ಭಗವಂತನ ಸ್ವರೂಪಗಳು ಅನೇಕವಾಗಿದ್ದರೂ ದೇವರು ಒಬ್ಬನೇ ಎಂದರು.
ಆಧ್ಯಾತ್ಮ ಸಾಧನೆಯಲ್ಲಿ ಶ್ರವಣಕ್ಕೆ ಮೊದಲ ಸ್ಥಾನವಿದೆ. ಶ್ರವಣ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಕೇಳಿದ್ದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸಿದರೆ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ಡಾ. ಕೆ. ಅನಂತರಾಮು ಮಾತನಾಡಿ, ಶ್ರಾವಣಕ್ಕೂ-ಶ್ರವಣಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾಸದಲ್ಲಿ ಸದ್ವಿಚಾರಗಳ ಚಿಂತನೆ ಮಾಡಿದರೆ ಸಾಲದು, ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಸುಸಂಸ್ಕೃತರಾಗಿ ಬೆಳೆಯಲು ಇಂತಹ ಸತ್ಸಂಗಗಳು, ಪ್ರವಚನಗಳು ನಡೆಯುತ್ತಲೇ ಇರಬೇಕು. ಇದರಿಂದ ಚಿತ್ತಶುದ್ಧಿಯಾಗುತ್ತದೆ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದರು.
ಪೀಳಿಗೆಯಿಂದ ಪೀಳಿಗೆಗೆ ಬುದ್ಧಿ ಬೆಳೆಯುತ್ತಿದೆ. ಆದರೆ, ವಿವೇಕ ಬೆಳೆಯುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಸರಿಯಾದ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಇಂದಿನ ಮಕ್ಕಳು ಕೇವಲ ಅಂಕದಾಹಕ್ಕೆ ಸಿಲುಕಿದ್ದಾರೆ. ಗಾಂಧೀಜಿಯವರು ನೀತಿ ಇಲ್ಲದ ಶಿಕ್ಷಣ ಸಾಮಾಜಿಕ ಪಾಪಕ್ಕೆ ಸಮ ಎಂದಿದ್ದಾರೆ. ಯುವಜನರು ಇಂತಹ ಪ್ರವಚನ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.
ಬದುಕು ಉತ್ತಮ ಮೌಲ್ಯಗಳಿಂದ ರೂಪಗೊಳ್ಳಬೇಕು. ಕುವೆಂಪು ಅವರು ಹೇಳುವಂತೆ ಬುದ್ಧಿ ಮತ್ತು ಭಾವ ಒಂದಕ್ಕೊಂದು ಬೆಸೆದುಕೊಳ್ಳಬೇಕು. ಶ್ರಾವಣ ಮಾಸ ಭಕ್ತಿಯ ಬೀಜ ಬಿತ್ತುವ ಕಾಲ. ಯಾವುದೇ ಕಾರ್ಯವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಿರಂತರವಾಗಿ ಮಾಡುವುದೇ ಅನುಷ್ಠಾನ ಎಂದು ಹೇಳಿದರು. ವಿದ್ವಾನ್ ಕೃ. ರಾಮಚಂದ್ರ ಅವರು ಗಮಕ ವಾಚನ ಮಾಡಿದರು