ಯುವಕರೇ, ಸೈನ್ಯಕ್ಕೆ ಸೇರಿ ಭವಿಷ್ಯ ರೂಪಿಸಿಕೊಳ್ಳಿ

26 ckm 4 web
Published on

ಚಿಕ್ಕಮಗಳೂರು: ಯುವಕರು ಭಾರತೀಯ ಸೈನ್ಯಕ್ಕೆ ಸೇರುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಮ್ಮು-ಕಾಶ್ಮೀರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆ.ಕರ್ನಲ್ ಜೋಳಿಸನ್ ಹೇಳಿದರು. ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗ್ನಿಪಥ ಯೋಜನೆಯು ಯುವಕರಿಗೆ ಪ್ರಯೋಜನಕಾರಿ. 4 ವರ್ಷದ ಈ ಯೋಜನೆಯಲ್ಲಿ ಸೇವೆ ಸಲ್ಲಿಸಿದ ನಂತರ ಉನ್ನತ ಶಿಕ್ಷಣಕ್ಕೆ ಅಥವಾ ಸೇವೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶವಿದೆ. ಸೇವೆಯ ನಂತರ ಶಿಸ್ತುಬದ್ಧ ಜೀವನಕ್ಕೆ ನೆರವಾಗಲಾಗುತ್ತದೆ. ಸೇನೆಯ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಿದ ಅವರು, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅತ್ಯುನ್ನತ ಸ್ಥಾನವೂ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಸೈನ್ಯಕ್ಕೆ ಸೇರುವ ಬಗ್ಗೆ ಹೆಚ್ಚು ಆಸಕ್ತರಾಗಬೇಕು ಎಂದು ಮನವಿ ಮಾಡಿದರು. ಮಲೆನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್ ಮಾತನಾಡಿ, ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ದೇಶದ ಸ್ವಾತಂತ್ರ್ಯ್ಕಾಗಿ ತ್ಯಾಗ, ಬಲಿದಾನಗೈದ ಹಿರಿಯರ ಸ್ಮರಣೆ ಅಗತ್ಯ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net