ಯುವಕರು ಸಮಾಜದ ಆಸ್ತಿ

21 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತರರಿಗೆ ಸಹಾಯ ಮಾಡುವ ಮೂಲಕ ನಮ್ಮ ಯೌವನಸ್ಥರು ಪ್ರಕಾಶಮಾನವಾಗಿ ಹೊಳೆಯಬೇಕು ಎಂದು ಕರ್ನಾಟಕ ಉತ್ತರ ಸಭಾಪ್ರಾಂತದ ಬಿಶೋಪ್ ಮಾರ್ಟಿನ್ ಸಿ. ಬೋರ್ಗಾಯಿ ಹೇಳಿದರು.
ನಗರದ ಕರ್ನಾಟಕ ಉತ್ತರ ಸಭಾಪ್ರಾಂತದ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಸಮಿತಿ ವತಿಯಿಂದ ಆರ್‌ಎಲ್‌ಟಿಸಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಯೌವನಸ್ಥರ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ನಮ್ಮ ಸಮಾಜದ ಆಸ್ತಿ. ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತೆ ಒಳ್ಳೆ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಯುವಕರು ಭವಿಷ್ಯದಲ್ಲಿ ಸ್ವಂತ ಬಲದ ಮೇಲೆ ನಿಂತುಕೊಳ್ಳಲಿ ಎಂಬ ಉದ್ದೇಶದಿಂದಲೇ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಜತೆಗೆ ಕೂಟದ ಸದುಪಯೋಗ ಪಡೆಯಬೇಕು ಎಂದರು.
ಕರ್ನಾಟಕ ಉತ್ತರ ಸಭಾಪ್ರಾಂತದ ಗೌರವ ಕಾರ್ಯದರ್ಶಿ ವಿಜಯಕುಮಾರ್ ದಂಡಿನ್ ಮಾತನಾಡಿ, ಇಂತಹ ಕಾರ್ಯಕ್ರಮ ಬಹಳ ವರ್ಷಗಳಿಂದ ನಡೆಯುತ್ತಿದೆ. ಮಕ್ಕಳು ಉತ್ತಮವಾಗಿ ಓದಿ ಸಭಾ ಪ್ರಾಂತಕ್ಕೆ ಒಳ್ಳೆ ಹೆಸರು ತರಲಿ ಎಂಬ ಕಾರಣಕ್ಕೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ಅವಕಾಶವನ್ನು ಸಾವಿರಾರು ಮಕ್ಕಳು ಸದ್ಬಳಕೆ ಮಾಡಿಕೊಂಡಿದ್ದಾರೆ. ನಾವು ವಿದ್ಯಾರ್ಥಿವೇತನ ಮಾತ್ರ ನೀಡುವುದಿಲ್ಲ. ಅದರೊಂದಿಗೆ ತಮ್ಮ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುಲು ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.
ಕರ್ನಾಟಕ ಉತ್ತರ ಸಭಾಪ್ರಾಂತದ ಉಪಾಧ್ಯಕ್ಷ ಫಾದರ್ ರೆ. ರವೀಂದ್ರನಾಥ್ ಜೋಸೆಫ್, ಪ್ರವೀಣ ಕ್ರಿಸ್ಟೋಫರ್, ಡಾ. ಎಸ್.ವಿ. ಹೆಗಡಾಳ್, ರೆ. ಸ್ಯಾಮುಯಲ್ ಕ್ಯಾಲ್ವಿನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಫಾ.ರೆ. ಸುನಿಲ ಕುಮಾರ್, ವಿಜಯ ಕನಕರಾಜ, ಇತರರು ಇದ್ದರು. ಪ್ರೊ. ಕಮಲಾ ಡವಳೆ ಸ್ವಾಗತಿಸಿದರು. ಪ್ರಭಾ ಮಳೆಕರ್ ನಿರೂಪಿಸಿದರು. ಮೋಸೆಸ್ ಹುಗ್ಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net