ಯುವಕರು ಸಮಾಜ ಸೇವೆಗೆ ಮುಂದಾಗಲಿ

2508-Kpl-Ravi-2
Published on

ಕೊಪ್ಪಳ:ಯುವಕ-ಯುವತಿಯರನ್ನು ಸಮಾಜ ಸೇವೆಯಲ್ಲಿ ತೊಡಗಿಸುವಂತೆ ಮಾಡುವ ಉದ್ದೇಶದಿಂದ ಹಿಂದು ಸೇವಾ ಪ್ರತಿಷ್ಠಾನ ಜನ್ಮ ತಾಳಿದೆ ಎಂದು ಪ್ರತಿಷ್ಠಾನದ ಸಂಚಾಲಕ ಸುಧಾಕರ ಹೇಳಿದರು.


ನಗರದ ಕುಷ್ಟಗಿ ರಸ್ತೆಯಲ್ಲಿ ಪ್ರತಿಷ್ಠಾನದಿಂದ ನಿರ್ಮಿಸಲಾಗುತ್ತಿರುವ ಮಹಿಳಾ ಸಬಲೀಕರಣ ಮತ್ತು ವಿವಿಧ ಕೌಶಲಗಳ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.


80ರ ದಶಕದಲ್ಲಿ ಪ್ರತಿಷ್ಠಾನ ಜನ್ಮ ತಾಳಿತು. ಆರಂಭದಲ್ಲಿ 23 ಯುವಕರು ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಗೆ ಬಂದರು. ಅವರಿಗೆ ಸೂಕ್ತ ತರಬೇತಿ ನೀಡಿ ಯೋಜನೆ ರೂಪಿಸಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಲಾಯಿತು. ಇದರಿಂದ ಉತ್ತಮ ಫಲಿತಾಂಶ ದೊರೆಯಿತು. ನಂತರ ಯುವತಿಯರೂ ಸೇವೆಗೆ ಮುಂದೆ ಬಂದರು. ಅವರಿಗೆ ಹೊಂದುವಂತೆ ಯೋಜನೆ ರೂಪಿಸಿ ತರಬೇತಿಗೊಳಿಸಿ ಕೆಲಸ ಮಾಡಿಸಲಾಗುತ್ತಿದೆ. ಇಷ್ಟು ದಿನ ಬೆಂಗಳೂರು ಕೇಂದ್ರಿತವಾಗಿ ತರಬೇತಿ, ಸೇವೆ ನಡೆಯುತ್ತಿದೆ. ಇನ್ನು ಮುಂದೆ ಕೊಪ್ಪಳ ಮೂಲಕ ಉತ್ತರ ಕರ್ನಾಟಕದಲ್ಲೂ ಸೇವೆ ನಡೆಯಲಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.


ಎಚ್‌ಪಿಸಿಎಲ್ ನಿರ್ದೇಶಕ ಡಾ.ನಾಗರಾಜ ಭಾಲ್ಕಿ ಮಾತನಾಡಿ, ಇದೊಂದು ಅತ್ಯುತ್ತಮ ಸಮಾಜ ಸೇವೆ. ಇಂಥ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಖುಷಿ ಎನಿಸುತ್ತಿದೆ. ನಾವೂ ಸಮಾಜ ಸೇವೆಯ ಭಾಗವಾಗಲು ಪ್ರತಿಷ್ಠಾನದವರು ಅವಕಾಶ ಕಲ್ಪಿಸಿದ್ದಾರೆ. ನಮ್ಮಿಂದ ಸಾಧ್ಯವಾದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.


ಪ್ರತಿಷ್ಠಾನದ ಎಂಡಿ ಮಿಲಿಂದ್ ಎಸ್.ಗೋಖಲೆ ಮಾತನಾಡಿದರು. ಕಟ್ಟಡ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟರ್, ರಾಮಾಂಜನೇಯ ಪ್ರಸಾದ, ಸಂಸದ ಸಂಗಣ್ಣ ಕರಡಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್, ಸಹಕಾರಿ ಧುರಿಣ ರಮೇಶ ವೈದ್ಯ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಪ್ರಮುಖರಾದ ರಾಜಶೇಖರ ಆಡೂರು, ಆರ್.ಬಿ.ಪಾನಘಂಟಿ, ಅಪ್ಪಣ್ಣ ಪದಕಿ, ಭೀಮರಾವ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net