

ಚಿಕ್ಕಮಗಳೂರು: ಕಾನೂನು ಪ್ರಜ್ಞೆ, ಜಾಗರೂಕತೆ ಹಾಗೂ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಆತ್ಮಧೈರ್ಯದಿಂದ ಎದುರಿಸಲು ಸಂವಿಧಾನದ ಅರಿವು ಹೊಂದುವುದು ಬಹುಮುಖ್ಯ ಎಂದು ವಕೀಲ ಅನಿಲ್‌ಕುಮಾರ್ ತಿಳಿಸಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಬಳಗದಿಂದ ಪರಮೇಶ್ವರ್ ಅವರ ಜನ್ಮ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ದೌರ್ಜನ್ಯ, ತೊಂದರೆ, ಭ್ರಷ್ಟಚಾರಗಳಿಗೆ ಕಡಿವಾಣಹಾಕಲು ವಿದ್ಯಾರ್ಥಿದೆಸೆಯಿಂದಲೇ ಯುವಕರು ಸಂವಿಧಾನದ ತಿಳಿವಳಿಕೆ ಹೊಂದಿರಬೇಕು. ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸದೃಢವಾಗಿ ಎದುರಿಸಲು ಸಂವಿಧಾನ ಗ್ರಂಥ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮಾದಕವಸ್ತು, ವ್ಯಸನ ಮತ್ತು ದುಶ್ಚಟಗಳಿಗೆ ಬಲಿಯಾಗುವ ಜೊತೆಗೆ ಅಪರಾಧ ಪ್ರಕರಣಗಳಲ್ಲಿ ತೊಡಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಗೃಹಮಂತ್ರಿ ಜಿ.ಪರಮೇಶ್ವರ್ ಅವರು ಮನೆ ಮನೆಗೆ ಪೊಲೀಸ್ ಭೇಟಿ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಿ ಪಾಲಕರಲ್ಲಿ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಂವಿಧಾನ ಎಂದರೆ ಕೇವಲ ಸಮಸ್ಯೆಗಳನ್ನು ಎದುರಿಸಲು ಮಾತ್ರ ಸೀಮಿತವಾಗಿಲ್ಲ. ಸಂವಿಧಾನ ಹಕ್ಕು ಮತ್ತು ಸಂವಿಧಾನದ ಕಾನೂನುಗಳನ್ನು ಎಲ್ಲೆಡೆ ಪರಿಚಯಿಸಲು ದಿಕ್ಸೂಚಿಯಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಸುಮಾರು ೫೦೦ಕ್ಕೂ ಹೆಚ್ಚು ಪುಸ್ತಕಗಳನ್ನು ತಾಲೂಕಿನಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗಳಿಗೆ ಹಂಚಿಕೆ ಮಾಡಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾಲೇಜಿನ ಉಪನ್ಯಾಸಕ ವೀರಣ್ಣ ಗೌಡ ಮಾತನಾಡಿ, ಸಂವಿಧಾನ ಕೇವಲ ಗ್ರಂಥವಲ್ಲ. ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಬದುಕು ಮತ್ತು ವ್ಯಕ್ತಿತ್ವ ಪರಿಪೂರ್ಣಗೊಳಿಸಲು ಸಂವಿಧಾನ ಪುಸ್ತಕ ಬಹುದೊಡ್ಡ ಸ್ಥಾನವಹಿಸಿದ ಕಾರಣ ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದು ವಿಶ್ವದಲ್ಲೇ ಮನ್ನಣೆಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿನಿ ಮಾನ್ಯ ಮಾತನಾಡಿ, ಪ್ರತಿದಿನ ಪಠ್ಯದ ಜೊತೆಗೆ ಸಂವಿಧಾನ ಒಂದು ಪುಟವನ್ನು ವಿದ್ಯಾರ್ಥಿಗಳು ಓದುವ ಅಭ್ಯಾಸ ಮಾಡಿಕೊಂಡರೆ ಜ್ಞಾನ ವೃದ್ಧಿಯಾಗುವ ಜೊತೆಗೆ ಆಕಸ್ಮಿಕವಾಗಿ ಜರುಗುವ ಘಟನೆಗಳನ್ನು ಸಂವಿಧಾನ ವಿಧಿಗಳಿಂದ ನ್ಯಾಯಬದ್ಧವಾಗಿ ಎದುರಿಸಬಹುದು ಹಾಗೂ ಮತದಾನದ ಅರಿವು, ಸರ್ಕಾರದ ಆಡಳಿತವನ್ನು ತಿಳಿಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ಭೀಮ್ ಆರ್ಮಿ ಗೌರವಾದ್ಯಕ್ಷ ಹೊನ್ನೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್‌ಆನಂದ್, ಬಳಗದ ಮುಖಂಡರಾದ ಉಪ್ಪಳ್ಳಿ ರಾಜು, ರಮೇಶ್, ಸತೀಶ್, ಸುಧೀರ್ ಮತ್ತಿತರರಿದ್ದರು.