

ನಾಲತವಾಡ: ಯುವಕರು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಾಭಿಮಾನ ಬೆಳೆಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ಅಂಗಡಿ ಹೇಳಿದರು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ವೀರೇಶ್ವರ ಪಪೂ ಕಾಲೇಜಿನ ಸಹಯೋಗದಡಿ ಇಲ್ಲಿಯ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಮಟ್ಟದ ಪಪೂ ಕಾಲೇಜುಗಳ ಖೋಖೋ ಹಾಗೂ ಕಬಡ್ಡಿ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇವಲ ಗೆಲುವು ಮಾತ್ರ ನನ್ನ ಗುರಿ ಎನ್ನುವ ಹವ್ಯಾಸದಿಂದ ದೂರವಿದ್ದು, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಎಂದರು.
ಫಲಿತಾಂಶ: ಬಾಲಕಿಯರ ಖೋಖೋ ಆಟದಲ್ಲಿ ಮುದ್ದೇಬಿಹಾಳದ ಎಂಜಿವಿಸಿ ಕಾಲೇಜಿನ ಬಾಲಕಿಯರು ಪ್ರಥಮ, ಸ್ಥಳೀಯ ವೀರೇಶ್ವರ ಕಾಲೇಜಿನ ಬಾಲಕಿಯರು ದ್ವಿತೀಯ ಸ್ಥಾನ ಗಳಿಸಿಕೊಂಡರು. ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ತಾಳಿಕೋಟೆಯ ವಿವಿಎಸ್ ಮಹಿಳಾ ಪಪೂ ಕಾಲೇಜು ಪ್ರಥಮ, ಮುದ್ದೇಬಿಹಾಳದ ಸರ್ಕಾರಿ ಪಪೂ ಕಾಲೇಜು ದ್ವಿತೀಯ, ಬಾಲಕರ ಖೋಖೋದಲ್ಲಿ ಸ್ಥಳೀಯ ವೀರೇಶ್ವರ ಪಪೂ ಕಾಲೇಜು ಪ್ರಥಮ, ತಾಳಿಕೋಟೆಯ ಶಿವಾಚಾರ್ಯ ಪಪೂ ಕಾಲೇಜು ದ್ವಿತೀಯ, ಬಾಲಕರ ಕಬಡ್ಡಿಯಲ್ಲಿ ಎಸ್‌ಎಸ್ ಪಿಯು ಕಾಲೇಜು ಪ್ರಥಮ ಹಾಗೂ ಮುದ್ದೇಬಿಹಾಳದ ಸರ್ಕಾರಿ ಪಪೂ ಮ.ವಿ ದ್ವಿತೀಯ ಸ್ಥಾನ ಪಡೆದುಕೊಂಡರು.