ಯುವಕರು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ

9 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಯುವ ಜನರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಇತರರಿಗೆ ಮಾದರಿಯಾಗಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಕ್ಲಾಸಿಕ್ ಕೆಎಎಸ್ ಹಾಗೂ ಐಎಎಸ್ ಸ್ಟಡಿ ಸರ್ಕಲ್ ರಜತ ಮಹೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತ್ಯಲ್ಪ ಅವಧಿಯಲ್ಲೇ ಕ್ಲಾಸಿಕ್ ಸಂಸ್ಥೆ ಹೆಮ್ಮರವಾಗಿ ಬೆಳೆದು ನಾಡಿನಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ತರಬೇತಿ ಪಡೆದ ಸಾವಿರಾರು ಜನರು ವಿವಿಧ ಸರ್ಕಾರಿ ನೌಕರಿಗಳನ್ನು ಪಡೆದು ಜೀವನ ರೂಪಿಸಿಕೊಂಡಿದ್ದಾರೆ. ಇದಕ್ಕೆ ಸಂಸ್ಥೆ ಸಂಸ್ಥಾಪಕ ಲಕ್ಷ್ಮಣ ಉಪ್ಪಾರ ಪರಿಶ್ರಮ, ಮಾನವೀಯ ಮೌಲ್ಯ ಕಾರಣ. ಪಾಲಕರು ಮಕ್ಕಳಿಗೆ ಮೊದಲು ಸಂಸ್ಕಾರ ತಿಳಿಸಿದಾಗಲೇ ಅವರು ಉತ್ತಮ ಪ್ರಜೆಗಳಾಗಲು ಸಾಧ್ಯ. ಇಂತಹ ಸಂಸ್ಕಾರವಂತ ಕುಟುಂಬದಿಂದ ಬಂದ ಲಕ್ಷ್ಮಣ ಉಪ್ಪಾರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಸಂಸ್ಥೆ ಯಶಸ್ಸಿಗೆ ನಮ್ಮ ಸಿಬ್ಬಂದಿ ಪರಿಶ್ರಮ ಕಾರಣ. ಎಲ್ಲರ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲ್ಲಿ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಇಚ್ಛೆ ಇದೆ ಎಂದರು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಉಪ್ಪಿನ ಬೆಟಗೇರಿ ಮೂರುಸಾವಿರ ಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯಲ್ಲಿ ತರಬೇತಿ ಪಡೆದು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ನೇಮಕಗೊಂಡ 200ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಸಾಧಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಶಾಸಕ ಅರವಿಂದ ಬೆಲ್ಲದ, ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಬಿಬಿಎಂಪಿ ಜಂಟಿ ನಿರ್ದೇಶಕ ಲಿಂಗಣ್ಣ ಗುಂಡಳ್ಳಿ, ಮಹೇಶ ಟೆಂಗಿನಕಾಯಿ, ರೇಣುಕಾ ಉಪ್ಪಾರ, ರಮೇಶ ಪರವಿನಾಯ್ಕ, ರಘುನಂದನ, ನಾಗರತ್ನಾ ದಂಡಿನ, ಕವಿವಿ ಕುಲಪತಿ ಪ್ರೊ.ಕೆ. ಬಿ.ಗುಡಸಿ, ಸುಭಾಸ ಸಂಪಗಾಂವಿ, ಇತರರು ಇದ್ದರು.
ನಂತರ ಗುರುರಾಜ ಹೊಸಕೋಟೆ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net