

ನಾಗಮಂಗಲ: ಐಕ್ಯತೆಯ ಭಾರತಕ್ಕೆ ಶಾಂತಿಯ ಹೆಜ್ಜೆ ಘೋಷಣೆಯಡಿ ನಡೆಯುತ್ತಿರುವ ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಸರಳತೆಗೆ ಸಾರ್ವಜನಿಕರು ಮನಸೋತರು.
ಜಿಲ್ಲೆಯಲ್ಲಿ 3ನೇ ದಿನದ ಪಾದಯಾತ್ರೆಯಲ್ಲಿ ಶುಕ್ರವಾರ ರಾಗಾ ಹೆಜ್ಜೆ ಹಾಕಿದರು. ಅಂತಿಮ ದಿನದ ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಸಾರ್ವಜನಿಕರನ್ನು ಅವರು ನಗುಮುಖದಿಂದಲೇ ಮಾತನಾಡಿಸುತ್ತಿದ್ದ ಪರಿಯನ್ನು ಕಂಡ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ‘ಗೌಡರ ಗೌಡ ರಾಹುಲ್‌ಗೌಡ’ ಎಂದು ಘೋಷಣೆ ಕೂಗಿದರು.
ಪಟ್ಟಣದ ಹೊರವಲಯದ ಕೆ.ಮಲ್ಲೇನಹಳ್ಳಿಯಿಂದ ಶುಕ್ರವಾರ ಬೆಳಗ್ಗೆ 6.30ಕ್ಕೆ ಆರಂಭವಾದ ಪಾದಯಾತ್ರೆ ಪಟ್ಟಣದ ಮೂಲಕ ಅಂಚೆಭೂವನಹಳ್ಳಿಯ ವಿಶ್ರಾಂತಿಯ ಬಿಡಾರಕ್ಕೆ 11 ಗಂಟೆಗೆ ತಲುಪಿತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರನ್ನು ನೋಡಲು ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಸಾಲಾಗಿ ನಿಂತಿದ್ದರು. ಅವರನ್ನು ಕಂಡು ರಾಹುಲ್‌ಗಾಂಧಿ ಕೈ ಬೀಸಿ ನಮಸ್ಕರಿಸಿದರು. ರಾಹುಲ್ ಜತೆ ಬಹುತೇಕ ಯುವಸಮೂಹ ಹೆಜ್ಜೆ ಹಾಕಿದ್ದು ಕಂಡು ಬಂತು. ನಿರಂತರ ಪಾದಯಾತ್ರೆಯಿಂದ ದಣಿದಿದ್ದರೂ ದಾರಿಯುದ್ದಕ್ಕೂ ಜನರನ್ನು ನಗುನಗುತ್ತಲೇ ಮಾತನಾಡಿಸಿದರು. ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ದಲಿತ ಮುಖಂಡರನ್ನು ಹತ್ತಿರಕ್ಕೆ ಕರೆದು ಮಾತನಾಡಿಸಿದರು.
ಮಹಿಳೆಗೆ ಮಾಸ್ಕ್: ಪಟ್ಟಣದಲ್ಲಿ ಪಾದಯಾತ್ರೆ ಸಾಗುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಮಹಿಳೆಯೊಬ್ಬರು ದಿಢೀರ್ ರಾಹುಲ್‌ಗಾಂಧಿ ಕಡೆಗೆ ರಸ್ತೆಬದಿಯಿಂದ ನುಗ್ಗಿಬಂದರು. ಆ ಸಂದರ್ಭ ಮಹಿಳೆಯನ್ನು ಹತ್ತಿರಕ್ಕೆ ಕರೆದು ಮಹಿಳೆಗೆ ಸ್ವತಃ ಮಾಸ್ಕ್ ಹಾಕಿದರು. ಮಾತ್ರವಲ್ಲದೆ ಮಹಿಳೆಯ ಜತೆ ಕೆಲಕಾಲ ಮಾತನಾಡುತ್ತಾ ಕೆಲ ದೂರ ಹೆಜ್ಜೆಹಾಕಿದರು.
ಇನ್ನು ರಾಹುಲ್‌ಗಾಂಧಿ ಜತೆ ಮಗುವಿನೊಂದಿಗೆ ಫೋಟೋ ತೆಗೆಸಿಕೊಳ್ಳಲು ವ್ಯಕ್ತಿಯೊಬ್ಬ ಬಂದಿದ್ದರು. ಈ ಸಂದರ್ಭ ಮೊದಲು ಸೆಲ್ಫಿ ಕ್ಲಿಕ್ಕಿಸಿ ನಂತರ ಮಗುವನ್ನು ರಾಹುಲ್‌ಗಾಂಧಿ ಅವರೇ ಎತ್ತಿಕೊಂಡು ತಮ್ಮ ಮೊಬೈಲ್‌ನಲ್ಲಿ ಮಗು ಫೋಟೋ ತೆಗೆದುಕೊಂಡರು. ಮತ್ತೊಂದೆಡೆ ಮಾರ್ಗಮಧ್ಯೆ ಭಾರತಾಂಭೆಯ ವೇಷತೊಟ್ಟಿದ್ದ ಪುಟ್ಟ ಬಾಲಕಿಯನ್ನು ಹತ್ತಿರಕ್ಕೆ ಕರೆದ ರಾಗಾ ಬಾಲಕಿಯ ಜತೆ ಹೆಜ್ಜೆ ಹಾಕಿ ನಂತರ ಆಕೆಯಿಂದ ರಾಷ್ಟ್ರಧ್ವಜವನ್ನು ಪಡೆದರು.
ದಲಿತ ಮುಖಂಡನೊಂದಿಗೆ ಹೆಜ್ಜೆ: ಪಾದಯಾತ್ರೆ ತಾಲೂಕಿನ ತೊಳಲಿ ಗ್ರಾಮದ ಬಳಿ ತೆರಳುವ ಸಂದರ್ಭದಲ್ಲಿ ರಸ್ತೆಬದಿ ನೀಲಿ ಶಾಲು ಧರಿಸಿ ನಿಂತಿದ್ದ ದಲಿತ ಮುಖಂಡ ಮಾಚನಾಯಕನಹಳ್ಳಿ ನಾಗರಾಜು ಅವರನ್ನು ಹತ್ತಿರಕ್ಕೆ ಕರೆದ ರಾಹುಲ್‌ಗಾಂಧಿ ಕೆಲ ದೂರ ಅವರೊಂದಿಗೆ ಹೆಗಲ ಮೇಲೆ ಕೈಹಾಕಿಕೊಂಡು ಮಾತನಾಡುತ್ತಾ ಹೆಜ್ಜೆ ಹಾಕಿದರು. ನಾಗರಾಜು ಅವರ ಮಾತನ್ನು ಆರ್.ಧ್ರುವನಾರಾಯಣ ರಾಹುಲ್‌ಗಾಂಧಿಗೆ ಅನುವಾದ ಮಾಡಿದರು.
ಬಾಳೆ ತೋಟದಲ್ಲಿ ವಿಶ್ರಾಂತಿ: ಪಾದಯಾತ್ರೆಯ ನಡುವೆ ತೊಳಲಿ ಗ್ರಾಮದ ಕೆರೆ ಪಕ್ಕದಲ್ಲಿನ ಬಾಳೆ ತೋಟದಲ್ಲಿ ರಾಹುಲ್ ಕೆಲ ಕಾಲ ವಿಶ್ರಾಂತಿ ಪಡೆದರು. ವಿಶ್ರಾಂತಿ ವೇಳೆ ಎಳನೀರು ಕುಡಿದು ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಅವರೊಂದಿಗೂ ಕೆಲ ಸಮಯ ಮಾತನಾಡಿದರು.
ಯಾತ್ರೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಉಪಾಧ್ಯಕ್ಷ ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ರಮೇಶ್ ಜಯರಾಂ, ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಇದ್ದರು.
ರಾಹುಲ್‌ಗೌಡ ಘೋಷಣೆ: ಯಾತ್ರೆಯಲ್ಲಿ ಕಾರ್ಯಕರ್ತರಿಂದ ಗೌಡರ ಗೌಡ ರಾಹುಲ್‌ಗೌಡ ಎಂಬ ಜೈಕಾರದ ಘೋಷಣೆಗಳು ಮೊಳಗಿದವು. ರಾಹುಲ್ ಗಾಂಧಿಯನ್ನು ರಾಹುಲ್‌ಗೌಡ ಎಂದು ಕಾರ್ಯಕರ್ತರು ಕೂಗಿ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿಗೂ ಗೌಡರ ಗೌಡ ಸ್ವಾಮಿಗೌಡ, ಗೆಲ್ತಾರಪ್ಪ ಗೆಲ್ತಾರೆ ಸ್ವಾಮಿಗೌಡ ಗೆಲ್ತಾರೆ ಎಂದು ಘೋಷಣೆ ಕೂಗಿದರು.
ಇನ್ನೊಂದೆಡೆ ತೊಲಗಲಿ ತೊಲಗಲಿ ಮೋದಿ ತೊಲಗಲಿ, ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ನೂರಾರು ಸಂಖ್ಯೆಯ ಕಾರ್ಯಕರ್ತರು ಧಿಕ್ಕಾರ ಕೂಗಿದರು. ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದಲ್ಲಿ ಪಾದಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಧಿಕ್ಕಾರದ ಘೋಷಣೆ ಮೊಳಗಿದವು.
ಆಂಜನೇಯನಿಗೆ ಪೂಜೆ: ತಾಲೂಕಿನಲ್ಲಿ 6ನೇ ದಿನದ ಪಾದಯಾತ್ರೆ ಆರಂಭಕ್ಕೂ ಮೊದಲು ಗುರುವಾರ ರಾತ್ರಿ ವಾಸ್ತವ್ಯವಿದ್ದ ಪಟ್ಟಣದ ಹೊರವಲಯದಲ್ಲಿರುವ ಕೇಂದ್ರೀಯ ಆಯುರ್ವೇದಿಕ್ ಆಸ್ಪತ್ರೆಯ ಮುಂಭಾಗದ ರಸ್ತೆ ಬದಿಯಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಹುಲ್‌ಗಾಂಧಿ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆಯನ್ನು ಆರಂಭಿಸಿದರು.