ಯುವಕರು ಬದಲಾವಣೆ ಹಾದಿಯಲ್ಲಿ ಸಾಗಬೇಕು

4GKK5
ಗೋಕಾಕದ ಸಂಪಾದನಾ ಮಠದಲ್ಲಿ ಹಮ್ಮಿಕೊಂಡಿದ್ದ ಯುವ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಮುರುಘರಾಜೇಂದ್ರ ಸ್ವಾಮೀಜಿ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಬಸವಲಿಂಗ ಸ್ವಾಮೀಜಿ, ತೇಜಸ್ವಿ ಕಟ್ಟಿಮನಿ, ಜಯಾನಂದ ಮುನವಳ್ಳಿ ಇತರರಿದ್ದರು.
Published on

ಗೋಕಾಕ: ತ್ರಿವಿಧ ದಾಸೋಹಗಳೊಂದಿಗೆ ರಾಜ್ಯದ ಮಠಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.
ಇಲ್ಲಿನ ಶೂನ್ಯ ಸಂಪಾದನಾ ಮಠದ ಕಾಯಕಯೋಗಿ ಲಿಂ. ಬಸವ ಸ್ವಾಮೀಜಿಗಳ 18ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿರುವ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜ್ಞಾನದಿಂದ ಎಲ್ಲವನ್ನೂ ಪಡೆಯಬಹುದು. ಜೀವನದಲ್ಲಿ ಮೊದಲು ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜ ಬದಲಾಗುತ್ತದೆ. ಆ ದಿಸೆಯಲ್ಲಿ ಯುವಕರು ಬೇರೆಯವರನ್ನು ದ್ವೇಷಿಸುವುದನ್ನು ಬಿಟ್ಟು ಬದಲಾವಣೆಯ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ಎಷ್ಟು ಬೇಕು ಅಷ್ಟು ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಬೇಕು. ವ್ಯವಸ್ಥೆಯನ್ನು ದ್ವೇಷ ಮಾಡದೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಸ್ವಾಭಿಮಾನ ಆತ್ಮಗೌರವವನ್ನು ಬಿಡದೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸತ್ಕರಿಸಲಾಯಿತು. ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿದರು. ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ತೇಜಸ್ವಿ ಕಟ್ಟಿಮನಿ, ಉತ್ಸವ ಸಮಿತಿ ಅಧ್ಯಕ್ಷ ಜಯಾನಂದ ಮುನವಳ್ಳಿ, ಸತೀಶ ಕಡಾಡಿ, ಕೆಂಪಣ್ಣ ವಣ್ಣೂರ, ರಾಜು ಬೈರುಗೋಳ ಇತರರಿದ್ದರು. ಶಿಕ್ಷಕರಾದ ಆರ್.ಎಲ್.ಮಿರ್ಜಿ ಮತ್ತು ಎಸ್.ಕೆ.ಮಠದ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net