

ಹುಬ್ಬಳ್ಳಿ: ಮುಂದಿನ 10-15 ವರ್ಷಗಳು ಭಾರತಕ್ಕೆ ಸುವರ್ಣ ಯುಗವಾಗಿದ್ದು, ಯುವಕರು ಉದ್ಯಮಶೀಲ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಹುಬ್ಬಳ್ಳಿ) ಸಹಾಯಕ ನಿರ್ದೇಶಕ ಕಾರ್ತಿಕ ಆರ್. ಕರೆ ನೀಡಿದರು.
ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ (ಎಸ್ಎಂಎಸ್ಆರ್)ನಲ್ಲಿ ಅಂತಾರಾಷ್ಟ್ರೀಯ ಎಂಎಸ್ಎಂಇ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಅಡೆತಡೆಯ ನಡುವೆಯೂ ಉದ್ಯಮದಲ್ಲಿ ಸುಧಾರಣೆ’ ಕುರಿತು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್ಗೆ ತಲುಪಬೇಕಾದರೆ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪಾತ್ರ ದೊಡ್ಡದು ಎಂದರು.
ಚೀನಾ, ಜಪಾನ್ ಮತ್ತು ಅಮೆರಿಕ ರಾಷ್ಟ್ರಗಳ ಆರ್ಥಿಕತೆಗೆ ಸಣ್ಣ ಮತ್ತು ಮಧ್ಯಮ ಉದ್ಯಮಗಳು 1 ಟ್ರಿಲಿಯನ್ ಡಾಲರ್ ಕೊಡುಗೆಯನ್ನು ನೀಡುತ್ತಿವೆ. ಭಾರತದ ಯುವಕರು ಉದ್ಯಮಿಗಳಾಗಲು ಪ್ರಯತ್ನಿಸಬೇಕು. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಡೀನ್ (ಶೈಕ್ಷಣಿಕ) ಡಾ. ಪ್ರಕಾಶ ತೇವರಿ ಮಾತನಾಡಿ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಕೊಡುಗೆ ನೀಡಲು ಭಾರತಕ್ಕೆ ಇದು ಸುಸಮಯವಾಗಿದೆ ಎಂದರು.
ವಿವಿಯ ಸಿ-ಟೈ ನಿರ್ದೇಶಕ ಶಿವಯೋಗಿ ತುರಮುರಿ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಉದ್ಯಮಿಗಳು, ಯುವಕರು ಪಾಲ್ಗೊಂಡಿದ್ದು ಪ್ರಶಂಸನೀಯ ಎಂದು ಹೇಳಿದರು.
ಸ್ಕೂಲ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ ನಿರ್ದೇಶಕ ಡಾ. ಎಂ.ಆರ್. ಸೊಲ್ಲಾಪುರ ಸ್ವಾಗತಿಸಿದರು.