ಯುವಕರಿಗೆ ಮಾದರಿ ವಿವೇಕಾನಂದ, ಬೋಸ್

CUK
Published on

ಕಲಬುರಗಿ ಸ್ವಾಮಿ ವಿವೇಕಾನಂದರು ಮತ್ತು ನೇತಾಜಿ ಸುಭಾಷಚಂದ್ರ ಬೋಸ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್. ಲಿಂಗಮೂರ್ತಿ ಹೇಳಿದರು.

ವಿವಿಯಲ್ಲಿ ಸ್ವಾಮಿ ವಿವೇಕಾನಂದ, ನೇತಾಜಿ ಜನ್ಮದಿನ ನಿಮಿತ್ತ ಕಾನೂನು ವಿಭಾಗ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಪಾಶ್ಚಿಮಾತ್ಯರನ್ನು ಪ್ರೇರೇಪಿಸಿದೆ. ಅವರು ಭಾರತೀಯ ತತ್ವಶಾಸ್ತç ಮತ್ತು ಧರ್ಮದ ಬಗ್ಗೆ ಹೆಚ್ಚು ಆಕರ್ಷಿತರಾದರು. ಸ್ವಾಮೀಜಿ ವಿಶ್ವಕ್ಕೆ ಭಾರತದ ಆಧ್ಯಾತ್ಮಿಕ ರಾಯಭಾರಿಯಾಗಿದ್ದರು ಎಂದರು.

ಬೋಸ್ ಅವರು ಭಾರತ ಸ್ವಾತಂತ್ರ ಚಳವಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಸೇನೆ ಮೂಲಕ ಬ್ರಿಟಿಷರಿಗೆ ಸಮಾನಾಂತರ ಬಲ ತಂದುಕೊಟ್ಟಿದ್ದರು. ಬ್ರಿಟಿಷರ ವಿರುದ್ಧ ಪಡೆಗಳನ್ನು ಒಂದುಗೂಡಿಸಿದರು. ಇಂದಿನ ಯುವಕರು ಅವರನ್ನು ಆದರ್ಶವಾಗಿ ಇಟ್ಟುಕೊಂಡು ರಾಷ್ಟç ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ಮತ್ತು ನ್ಯಾಯಶಾಸ್ತ್ರ ಅಧ್ಯಯನ ನಿಕಾಯದ ಡೀನ್ ಡಾ.ಬಸವರಾಜ ಕುಬಕಡ್ಡಿ ಮಾತನಾಡಿ, ಸಿಯುಕೆ ಕಾನೂನು ವಿಭಾಗ ಕಾನೂನು ಜ್ಞಾನದ ಜತೆಗೆ ಅರ್ಹ ವಿದ್ಯಾರ್ಥಿಗಳನ್ನು ಪೋಷಿಸುವ ಪರಿಸರ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದು ಸಮಾಜಕ್ಕೆ ನಾವು ನೀಡುವ ಅರ್ಥಪೂರ್ಣ ಕೊಡುಗೆ ಎಂದರು.

ಡಾ.ಅನಂತ ಚಿಂಚುರೆ, ಡಾ.ರೇಣುಕಾ ಗುಬ್ಬೇವಾಡ ಇತರರಿದ್ದರು. ೨೦೨೨-೨೪ರ ಬ್ಯಾಚ್ ಎಲ್‌ಎಲ್‌ಎಂ ವಿದ್ಯಾರ್ಥಿನಿ ಪುಷ್ಪಲತಾ ಕುಮಾರಿ ಅವರು ಬಿಹಾರದಲ್ಲಿ ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿಯಾಗಿ (ಎಪಿಒ) ನೇಮಕಗೊಂಡಿದ್ದರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net