

ಬಳ್ಳಾರಿ : ಯುವ ಪೀಳಿಗೆಯು ಹೆಚ್‌ಐವಿ ಸೋಂಕು ಬಗೆಗಿನ ಜಾಗೃತಿ ಹೊಂದಬೇಕು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ನಗರದ ಶ್ರೀಮೇಧಾ ಪದವಿ ಕಾಲೇಜು ಸಭಾಂಗಣದಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಸಹಯೋಗದೊಂದಿಗೆ ಹೆಚ್‌ಐವಿ ಜಾಗೃತಿ ಮಾಸಾಚರಣೆ ಅಂಗವಾಗಿ ಸೋಮವಾರ ಆಯೋಜಸಿದ್ದ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ನಶೆಮುಕ್ತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯು ತನ್ನದೆಯಾದ ಗುಣ ನಡತೆ ಹೊಂದಿದ್ದು, ಭವಿಷ್ಯದಲ್ಲಿ ದೇಶದ ಸದೃಢತೆಗಾಗಿ ಕೈಜೊಡಿಸಬೇಕಾದ ಯುವಜನತೆಯು ತಮ್ಮ ಮನಸ್ಸನ್ನು ಏಕಾಗ್ರತೆಗೊಳಿಸಿಕೊಂಡು ತಂದೆ ತಾಯಿ, ಗುರುಹಿರಿಯರ ಮಾರ್ಗದರ್ಶನದೊಂದಿಗೆ ಇತರೆ ದುಶ್ಚಟಗಳಿಗೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಮಾತನಾಡಿ, ಹೆಚ್‌ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಅತ್ಯಂತ ಗಂಭೀರ ರೂಪದಲ್ಲಿ ಅತೀ ವೇಗವಾಗಿ ಹರಡುವ ಸಾಧ್ಯತೆ ಇದೆ. ಯುವ ಜನತೆಯು ತಮ್ಮನ್ನು ತಾವು ನಿಗ್ರಹಿಸಿಕೊಳ್ಳುವ ಮೂಲಕ ತಮ್ಮೊಂದಿಗೆ ಇತರರನ್ನು ಹೆಚ್‌ಐವಿ ಸೋಂಕು ಮುಕ್ತರನ್ನಾಗಿಸಲು ಜಾಗೃತಿ, ಆಧುನಿಕ ಮಾಧ್ಯಮಗಳಲ್ಲಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರಿವು ಹೊಂದಬೇಕು ಎಂದರು.
ಬಳಿಕ ನಶೆಮುಕ್ತ ದಿನದ ಅಂಗವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು ಹಾಗೂ ಹೆಚ್‌ಐವಿ ಕುರಿತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.