ಯುವಕರಿಗೆ ಕಾನೂನು ಅರಿವು ಅತ್ಯಗತ್ಯ

22rajesh7
Published on

ಚಾಮರಾಜನಗರ: ಪ್ರತಿಯೊಬ್ಬರು ಕಾನೂನು ಪರಿಪಾಲನೆ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.

ತಾಲೂಕಿನ ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಹಾಗೂ ಯುವಕರು ವಾಹನ ಚಲಾವಣೆಯ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕಾನೂನು ಪರಿಪಾಲನೆಯ ಮೂಲಕ ಸದೃಢ ಸಮಾಜವನ್ನು ನಿರ್ಮಿಸಬಹುದಾಗಿದ್ದು, ಇದಿರಿಂದ ಅಪಘಾತಗಳು ಹಾಗೂ ಸಂಕಷ್ಟಗಳಿಂದ ದೂರವಾಗಬಹುದು ಎಂದು ಹೇಳಿದರು.

ಬಾಲ್ಯ ವಿವಾಹ ಅಪರಾಧವಾಗಿದ್ದು 18 ಮತ್ತು 21 ವಯೋಮಿತಿಯ ಯಾರು ವಿವಾಹವಾಗಬಾರದು, ವಿವಾಹಕ್ಕೆ ಪ್ರೋತ್ಸಾಹವನ್ನು ನೀಡಬಾರದು. ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷವಾದ ತಿಳುವಳಿಕೆ ಅಗತ್ಯವಾಗಿದ್ದು, ಕಾನೂನಿನ ಅರಿವು ನಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲನ್ಯಾಯ ಮಂಡಳಿ ಸದಸ್ಯ ಗಂಗಾಧರಸ್ವಾಮಿ, ಜಯಮ್ಮ, ಲತಾ, ನಾಗರಾಜು, ಪ್ರಾಂಶುಪಾಲ ಶಿವನಂಜಪ್ಪ, ಹಿರಿಯ ಉಪನ್ಯಾಸಕ ಆರ್.ಮೂರ್ತಿ, ಸುರೇಶ್ ಎನ್.ಋಗ್ವೇದಿ, ಬಸವಣ್ಣ, ಸುರೇಶ್, ದೊಡ್ಡಮ್ಮ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net