ಯುವಕರಿಂದ ಫಿಟ್ ಇಂಡಿಯಾ ರನ್

bidar chitra mahiti1
Published on

ಬೀದರ್: ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಬಿವಿಬಿ ಕಾಲೇಜಿನ ಎನ್ ಸಿಸಿ, ಎನ್ಎಸ್ಎಸ್ ಘಟಕಗಳಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ ನಡೆಯಿತು. 250ಕ್ಕೂ ಹೆಚ್ಚು ಯುವಕ, ಯುವತಿಯರು ಓಟದಲ್ಲಿ ಭಾಗಿಯಾದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್ ಅವರು ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಸದೃಢವಾಗಲು ಪ್ರತಿ ದಿನ ಕಡ್ಡಾಯ ಒಂದು ಗಂಟೆ ದೈಹಿಕ ವ್ಯಾಯಾಮ, ಯೋಗಾಭ್ಯಾಸ ಮಾಡಬೇಕು. ಸದೃಢ ರಾಷ್ಟ್ರ ನಿರ್ಮಾಣವಾಗಬೇಕಾದರೆ ಸಶಕ್ತ ಯುವ ಪೀಳಿಗೆ ಅಗತ್ಯ. ದೇಹ ಸರಿಯಿಲ್ಲದಿದ್ದರೆ ದೇಶ ಕಟ್ಟಲು ಸಹ ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಿ.ಎಲ್. ನಾಗೇಶ ಮಾತನಾಡಿ, ಇಂದಿನ ಯುವಕರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿರುವುದು ವಿಷಾದಕರ ಸಂಗತಿ. ಮೊಬೈಲ್ ಗೀಳು ಆರೋಗ್ಯಕರ ಜೀವನಶೈಲಿ ನಾಶ ಮಾಡಿದೆ. ಇದರಿಂದ ದೇಹ ಮತ್ತು ದೇಶದ ಭವಿಷ್ಯ ಎರಡು ಹಾಳಾಗುತ್ತಿವೆ. ಪ್ರತಿ ದಿನ ದೇಹ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ, ಪ್ರಾಣಾಯಾಮ ಸೇರಿದಂತೆ ಇತರೆ ಚಟುವಟಿಕೆಗಳು ಮಾಡಲು ಸಂಕಲ್ಪ ತೊಡಬೇಕು ಎಂದು ಹೇಳಿದರು.

ಕರ್ನಲ್ ಸುಶೀಲಕುಮಾರ ತಿವಾರಿ, ಕರ್ನಲ್ ಸಂದೀಪ ಜನಪಾತ್, ತಹಸೀಲ್ದಾರ್ ಗಂಗಾದೇವಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ದೀಪಕ್, ಪ್ರಮುಖರಾದ ಬಾಬು ವಾಲಿ, ಡಾ.ಗೌತಮ ಅರಳಿ, ಪ್ರಭುಲಿಂಗ ಬಿರಾದಾರ, ಎನ್ಸಿಸಿ ಅಧಿಕಾರಿ ಮೇಜರ್ ಡಾ. ಪಿ.ವಿಠಲ್ ರಡ್ಡಿ ಇದ್ದರು. ಪ್ರಾಚಾರ್ಯ ಎಸ್.ಕೆ. ಸಾತನೂರ ಸ್ವಾಗತಿಸಿದರು. ಬಸವರಾಜ ಹೇಡೆ ನಿರೂಪಣೆ ಮಾಡಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ್ ವಂದಿಸಿದರು. ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ಅವರು ಯೋಗಾಭ್ಯಾಸ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net