ಯುವಕರ ಹೃದಯದ ಆರೋಗ್ಯ ಸರಿ ಇಲ್ಲ: ಡಾ.ಸಿ.ಎನ್.ಮಂಜುನಾಥ್

28
Published on

ಮೈಸೂರು: ಯುವ ಭಾರತೀಯರ ಹೃದಯದ ಆರೋಗ್ಯ ಅಷ್ಟೊಂದು ಚೆನ್ನಾಗಿಲ್ಲ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಅಧ್ಯಯನವೊಂದರ ಪ್ರಕಾರ ಶೇ.50ರಷ್ಟು ಧೂಮಪಾನ, ಮದ್ಯಪಾನ, ಶೇ.10ರಷ್ಟು ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಶೇ.16ರಷ್ಟು ಕೌಟುಂಬಿಕ ಅನುವಂಶೀಯತೆ ಮತ್ತು ಶೇ.30ರಷ್ಟು ಯಾವುದೇ ಕಾರಣವಿಲ್ಲದೆ ಹೃದಯಾಘಾತವಾಗುತ್ತದೆ. ಈ ಪಟ್ಟಿಗೆ ಅತಿ ಒತ್ತಡವೂ ಇತ್ತೀಚಿಗೆ ಸೇರಿಕೊಂಡಿದೆ. ಇದು ಹೊಸ ಆರೋಗ್ಯ ಸಮಸ್ಯೆ. ಪ್ರತಿಯೊಬ್ಬರೂ ಇದರಲ್ಲಿ ಸಿಲುಕೊಂಡಿದ್ದಾರೆ. ಮಿತಿ ಮೀರಿದ ನಿರೀಕ್ಷೆ, ಆಪೇಕ್ಷಗಳೇ ಇದಕ್ಕೆ ಕಾರಣ ಎಂದರು.
ಮಕ್ಕಳ ಮೇಲೆಯೂ ಒತ್ತಡ ಶುರುವಾಗಿದೆ. ಕಲಿಕೆ, ಪಠ್ಯಕ್ರಮ, ಶಾಲಾ ಚಟುವಟಿಕೆಗಳ ಹೊರೆಯೇ ಇದಕ್ಕೆ ಕಾರಣ. ಆದ್ದರಿಂದ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕಿದೆ ಎಂದರು.

ಕೊಲೆಸ್ಟ್ರಾಲ್‌ನಿಂದ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಶರೀರದ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್‌ಗೂ ಸಂಬಂಧವಿಲ್ಲ. ಭಾರತೀಯ ಜೀವನ ಬದಲಾವಣೆ ಆಗಿರುವುದು ಈ ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ವಾಯುಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯದಿಂದಲೂ ಹೃದ್ರೋಗ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿದೆ. ಡ್ರಗ್ಸ್, ಕೊಕೇನ್, ಗಾಂಜಾವೂ ಹೃದ್ರೋಗಕ್ಕೆ ರಹದಾರಿಯಾಗಿದೆ. ಆದ್ದರಿಂದ ಯುವ ಜನರು ಎಚ್ಚರಿಕೆ ವಹಿಸಬೇಕು ಎಂದರು.

ಪ್ರತಿವರ್ಷ ಮದುವೆ ವಾರ್ಷಿಕೋತ್ಸವ, ಜನ್ಮದಿನ ಆಚರಣೆ ಮಾಡಿಕೊಳ್ಳುವಂತೆ ಆರೋಗ್ಯ ತಪಾಸಣಾ ವಾರ್ಷಿಕೋತ್ಸವವನ್ನೂ ಮಾಡಿಕೊಳ್ಳಬೇಕು. ಬಿಪಿ, ಮಧುಮೇಹ, ಇಸಿಜಿ ಮಾಡಿಸಿಕೊಳ್ಳಬೇಕು. ರಕ್ತದೊತ್ತಡಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ 5ವರ್ಷದ ಬಳಿಕ ಪರಿಣಾಮ ಬೀರುತ್ತದೆ. ಆಗ ಪಾಶ್ವವಾಯು, ಕಿಡ್ನಿ, ಹೃದಯ ವಿಫಲತೆಗೆ ಕಾರಣವಾಗಲಿದೆ ಎಂದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಿತ್ಯ ವಾಕಿಂಗ್, ಉತ್ತಮ ನಿದ್ದೆ, ವಾರಕ್ಕೆ ಒಮ್ಮೆ ಉಪವಾಸ, ನಗು, ಉತ್ತಮ ಸ್ನೇಹಿತರೊಂದಿಗೆ ಒಡನಾಟ, ಹಣ್ಣು-ತರಕಾರಿ ಸೇವನೆ, ಸಕಾರಾತ್ಮಕ ಚಿಂತನೆಯೇ ಉತ್ತಮ ಔಷಧ ಎಂದು ತಿಳಿಸಿದರು.

ಪುನೀತ್ ಸಾವಿಗೆ ಅನುವಂಶೀಯ ಕಾರಣ:
ಅನುವಂಶೀಯ ಕಾರಣಗಳಿಂದ ಪುನೀತ್‌ರಾಜ್‌ಕುಮಾರ್‌ಗೆ ಹೃದಯಾಘಾತ ಉಂಟಾಗಿ ಮೃತಪಟ್ಟರು ಎಂದು ಡಾ.ಮಂಜುನಾಥ್ ವಿವರಿಸಿದರು. ಪುನೀತ್ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಇಬ್ಬರಿಗೂ ಹೃದಯ ಸಂಬಂಧಿ ತೊಂದರೆಗಳಿದ್ದು ಅದು ಅನುವಂಶಿಕವಾಗಿದೆ ಎಂದರು.

ಜಯದೇವ ಸಂಸ್ಥೆಯ ಹಿರಿಮೆ:

ಬೆಂಗಳೂರಿನ ಎರಡು ಶಾಖೆ, ಮೈಸೂರು, ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ವರ್ಷಕ್ಕೆ 45 ಸಾವಿರ ಆಂಜಿಯೋಪ್ಲಾೃಸ್ಟಿ, ಆಂಜಿಯೋಗ್ರಾಮ್, ತೆರೆದ ಹೃದಯ ಶಸ್ತ್ರಚಿಕಿತ್ಸೆ. ಸಂಸ್ಥೆಯಲ್ಲಿ 105 ಹೃದ್ರೋಗ ತಜ್ಞರ ಕರ್ತವ್ಯ. ಈ ಎರಡು ವಿಷಯದಲ್ಲೂ ನಮ್ಮ ಸಂಸ್ಥೆ ದೇಶಕ್ಕೆ ಮೊದಲು.

1,800 ಹಾಸಿಗೆ ಹೊಂದಿರುವ ಜಯದೇವ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹಿರಿಮೆ ಹೊಂದಿದೆ.

ಇನ್ನೂ ಒಂದು ವಾರದಲ್ಲಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಜಯದೇವ ಆಸ್ಪತ್ರೆಯ ಉಪಕೇಂದ್ರ ಉದ್ಘಾಟನೆ.

ಹುಬ್ಬಳ್ಳಿಯಲ್ಲಿ 400 ಹಾಸಿಗೆ ಸೌಲಭ್ಯದ ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ.

ಸ್ಥಳೀಯ ಆಸ್ಪತ್ರೆಗಳಲ್ಲಿಯೇ ಶಮನಗೊಳ್ಳುವ ಕಾಯಿಲೆಗಳ ಚಿಕಿತ್ಸೆಗೂ ಜಯದೇವ ಆಸ್ಪತ್ರೆಯನ್ನು ರೋಗಿಗಳು ಅವಲಂಬಿಸುತ್ತಿದ್ದು, ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ.

*ಎಲ್ಲ ಜಿಲ್ಲೆಯಲ್ಲೂ ಜಯದೇವ ಆಸ್ಪತ್ರೆ ಸ್ಥಾಪನೆ ಮಾಡಿದರೆ ಎಚ್‌ಎಂಟಿ ಕಂಪನಿಗಾದ ನಷ್ಟ ನಮಗೂ ಆಗಬಹುದು. ಆರ್ಥಿಕ ನಿರ್ವಹಣೆ ದೃಷ್ಟಿಯಿಂದ ಎಲ್ಲರೂ ಯೋಚಿಸಬೇಕು. ಸ್ಥಾಪನೆಗೆ ಒತ್ತಡ ಹಾಕಬಾರದು

ಸರ್ಕಾರಕ್ಕೆ ಸಲಹೆ

ಆಯುಷ್ಮಾನ ಭಾರತ ಆರೋಗ್ಯ ವಿಮೆ ಯೋಜನೆಯಡಿ ಒಬ್ಬರಿಗೆ 2 ಲಕ್ಷ ರೂ. ವರೆಗೆ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಕುಟುಂಬಕ್ಕೆ 5 ಲಕ್ಷ ರೂ.ಮಿತಿ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾಲಕ್ಕೆ ತಕ್ಕಂತೆ ಇದರಲ್ಲೂ ಪರಿಷ್ಕರಣೆ ಆಗಬೇಕು.

ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರು ಕೆಲಸ ನಿರ್ವಹಿಸಲು ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಪ್ರತಿಯೊಂದು ಗ್ರಾಮದಲ್ಲೂ ಆಸ್ಪತ್ರೆ ನಿರ್ಮಾಣ ಅಸಾಧ್ಯ. ಆದ್ದರಿಂದ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸುವ ಕುರಿತು ಯೋಚಿಸಬೇಕು.

ಹೊಸ ಆಸ್ಪತ್ರೆ ಮಂಜೂರು ಮಾಡಿ ಕಟ್ಟಡ ನಿರ್ಮಿಸಿದರೆ ಸಾಲದು, ಅದಕ್ಕೆ ಅಗತ್ಯ ಸಿಬ್ಬಂದಿ ನೀಡಬೇಕು. ಆದ್ದರಿಂದ ಆಸ್ಪತ್ರೆ ಮಂಜೂರಾದಾಗಲೇ ವೈದ್ಯರು, ತಜ್ಞರು, ಸಿಬ್ಬಂದಿ ಹುದ್ದೆಗಳಿಗೂ ಅನುಮೋದನೆ ನೀಡಬೇಕು.

* ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ಇಲ್ಲ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಮಾನವ ಸಂಪನ್ಮೂಲ ಭರ್ತಿಯಾದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಒತ್ತಡವೂ ಹೆಚ್ಚಿದೆ

ಎಚ್ಚರಿಕೆ ಸಂದೇಶ

ಫಾಸ್ಟ್ ಫುಡ್ ಬೇಗ ಪ್ರಾಣ ತೆಗೆಯುವ ವಸ್ತು. ಇದರಿಂದ ದೂರ ಇರಿ.

ಒಂದೇ ಜಾಗದಲ್ಲಿ 4-5 ಗಂಟೆ ಕುಳಿತುಕೊಳ್ಳುವುದು 5 ಸಿಗರೇಟು ಸೇದುವುದಕ್ಕೆ ಸಮ.

ಮದ್ಯ ಕುಡಿದು ಸತ್ತವರಿಗಿಂತ ಚಿಂತೆ ಮಾಡಿ ಸತ್ತವರೇ ಹೆಚ್ಚು.

ಸಾಮಾಜಿಕ ಜಾಲತಾಣಗಳು ಸಮಾಜ ಮತ್ತು ಜನರ ಆರೋಗ್ಯ ಹಾಳು ಮಾಡುತ್ತಿದೆ. ಸುಳ್ಳು ಸುದ್ದಿ ಬಿತ್ತರಕ್ಕೂ ಇವೇ ಕಾರಣ.
*ವ್ಯಾಯಾಮ ಇತಿಮಿತಿ ಇರಲಿ. ಸಾಮರ್ಥ್ಯಕ್ಕೆ ತಕ್ಕಷ್ಟು ಮಾತ್ರ ಮಾಡಿ. ಏಕಾಏಕಿ ಹೆಚ್ಚಿನ ಅಭ್ಯಾಸ ಮಾಡಿದರೆ ಅಪಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net