

ಕಲಬುರಗಿ: ಯುವಕರು ತಮ್ಮಲ್ಲಿನ ಶಕ್ತಿ ಜಾಗೃತಗೊಳಿಸಿ, ಮಾನವೀಯ ಮೌಲ್ಯ ಅಳವಡಿಸಿಕೊಂಡು ಮೌಢ್ಯ, ಸಂಪ್ರದಾಯ, ಅಂಧಶ್ರದ್ಧೆ ಕಂದಾಚಾರದಿAದ ಹೊರ ಬಂದು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಚಿಂತಕ ಶ್ರೀಶೈಲ್ ಮಸೂತೆ ಹೇಳಿದರು.
ಫರಹತಾಬಾದ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ಯುವ ಜಾಗೃತಿ ಅಭಿಯಾನದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಗತಿಗೆ ನಮ್ಮ ಮಾನವೀಯ ಮೌಲ್ಯಗಳೇ ಶಾಶ್ವತ ಸಂಪತ್ತು ಎಂಬ ಅರಿವು ಎಲ್ಲರಿಗೂ ಇರಬೇಕು ಎಂದರು.
ಮುಖಂಡ ನಾಗೇಂದ್ರಪ್ಪ ನಿಂಬರ್ಗಿ ಮಾತನಾಡಿ, ಗ್ರಾಮಗಳ ಪ್ರಗತಿಗೆ ಯುವಕರು ದುಶ್ಚಟದಿಂದ ಹೊರ ಬರುವುದೇ ದಾರಿ. ಗುರು ಬಸವಾದಿ ಶರಣರ ತತ್ವ ಅರಿತು ಅಳವಡಿಸಿಕೊಂಡರೆ ನಾವೇ ನಿಜ ಶ್ರೀಮಂತರು ಎಂದರು.
ಪ್ರಾಂಶುಪಾಲೆ ಡಾ.ಇಂದುಮತಿ ಪಾಟೀಲ್ ಮಾತನಾಡಿ, ಯುವಕರು ದೇಶದ ಬೆನ್ನೆಲುಬಾಗಿದ್ದು, ಪ್ರಗತಿಗೆ ಶಿಕ್ಷಣವೇ ಮೂಲ ಎಂಬ ಸತ್ಯ ಮರೆತು ಮೌಢ್ಯದ ದಾಸರಾಗುತ್ತಿದ್ದಾರೆ. ಇದನ್ನು ಬಿಟ್ಟು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಅನುಸರಿಸಿದರೆ ಪ್ರಗತಿ ಸಾಧ್ಯ ಎಂದರು.
ಸಾಮಾಜಿಕ ಹೋರಾಟಗಾರ ಶಿವಕುಮಾರ ಶರ್ಮಾ, ಐಕ್ಯೂಎಸಿ ಘಟಕ ಸಂಯೋಜಕ ಡಾ.ರವೀಂದ್ರ ಭಂಡಾರಿ, ಉಪನ್ಯಾಸಕ ಡಾ.ಹರ್ಷವರ್ಧನ್ ಬಿ., ಸಂಗೀತ ಮುನ್ನೊಳ್ಳಿ, ಮಲ್ಲಿಕಾರ್ಜುನ್, ಹರ್ಷ ಮಾಶೆಟ್ಟಿ, ಬಸು ಮಾಶೆಟ್ಟಿ, ಪ್ರಕಾಶ ಕೂಡಿ, ಸಿದ್ದರಾಜ ನಿಂಬರ್ಗಿ, ಬಸವಕಿರಣ ನಿಂಬರ್ಗಿ ಇತರರಿದ್ದರು. ಡಾ.ಗಾಂಧೀಜಿ ಮೊಳಕೆರೆ ಸ್ವಾಗತಿಸಿದರು. ಡಾ.ನಾಗರಾಜ ಬಡಿಗೇರ ನಿರೂಪಣೆ ಮಾಡಿ, ವಂದಿಸಿದರು.