

ಹೊಸಪೇಟೆ: ಯುವಕನ ಸಾವಿಗೆ ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ನೂರಾರು ಜನ ನಗರದ ಖಾಸಗಿ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸರು ಪರಿಸ್ಥಿತಿ ನಿಭಾಯಿಸಲು ಪರದಾಡಿದರು.
ಸಂಕ್ಲಾಪುರ ನಿವಾಸಿ ಮಂಜುನಾಥ (23) ಮೃತ. ಬುಧವಾರ ಸಂಜೆ ಹೊಟ್ಟೆನೋವಿನ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಜುನಾಥ ದಾಖಲಾಗಿದ್ದರು. ವೈದ್ಯರ ಪರೀಕ್ಷೆ ಬಳಿಕ, ಉಳಿದಂತೆ ತರಬೇತಿ ನಿರತ ಶುಶ್ರೂಷಕರು ಚಿಕಿತ್ಸೆ ನಿರ್ವಹಿಸಿದ್ದಾರೆ. ಗುರುವಾರ ಸಂಜೆ ಏಕಾಏಕಿ ಮಂಜುನಾಥ ಆರೋಗ್ಯ ಬಿಗಡಾಯಿಸಿದಾಗ ಐದು ನಿಮಿಷಗಳ ಅವಧಿಯಲ್ಲಿ ಸಿಬ್ಬಂದಿ ಐದು ಇಂಜೆಕ್ಷನ್ ನೀಡಿದ್ದಾರೆ.
ಇದನ್ನೂ ಓದಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ಇದಾದ ಕೆಲವೇ ಸಮಯದಲ್ಲಿ ಮಂಜುನಾಥ ಜೀವ ಬಿಟ್ಟಿದ್ದಾರೆಂದು ಸಂಬಂಧಿಕರ ಆರೋಪ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಉಪ ವಿಭಾಗ ಆಸ್ಪತ್ರೆಗೆ ಕಳಿಸಲಾಯಿತು. ಸಾವಿನ ಸುದ್ದಿ ತಿಳಿದ ಸಂಬಂಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಎದುರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡುವಂತಾಯಿತು. ಘಟನೆಗೆ ಪ್ರತಿಕ್ರಿಯಿಸಿದ ಆಸ್ಪತ್ರೆ ವೈದ್ಯರು, ಮಂಜುನಾಥ ಅವರ ಆರೋಗ್ಯ ತೀವ್ರ ಬಿಗಡಾಯಿಸಿದ ಬಳಿಕವೇ ಆಸ್ಪತ್ರೆಗೆ ಕರೆತರಲಾಗಿದೆ. ಹೀಗಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತನ ಸಂಬಂಧಿಕರ ಆರೋಪಗಳು ನಿರಾಧಾರ ಎಂದಿದ್ದಾರೆ.