ಯುವಕನ ಪುಂಡಾಟಕ್ಕೆ ಗ್ರಾಮಸ್ಥರು ಹೈರಾಣು:ಎಸ್ಪಿಗೆ ಗ್ರಾಮಸ್ಥರು ದೂರು

ಯುವಕನ ಪುಂಡಾಟಕ್ಕೆ ಗ್ರಾಮಸ್ಥರು ಹೈರಾಣು:ಎಸ್ಪಿಗೆ ಗ್ರಾಮಸ್ಥರು ದೂರು
Published on

ಹಾಸನ: ಚನ್ನರಾಯಪಟ್ಟಣ ತಾಲೂಕಿನ ನೆಟ್ಟೆಕೆರೆ ಗ್ರಾಮದ ಮೋಹಿತ್ ಎಂಬ ಯುವಕ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದು ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಮೋಹಿತ್ ವಿಪರೀತ ಮದ್ಯವ್ಯಸನಿಯಾಗಿದ್ದು ಗ್ರಾಮದಲ್ಲಿ ಮಹಿಳೆಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂಟಿ ಮಹಿಳೆಯರು ಕಂಡರೆ ಚುಡಾಯಿಸುವುದು, ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸುವುದು ಹೀಗೆ ಸಮಾಜ ಬಾಹಿರ ಕೃತ್ಯಗಳ ಮೂಲಕ ಭಯ ಹುಟ್ಟಿಸಿದ್ದಾನೆ. ಆತನಿಗೆ ತಂದೆ-ತಾಯಿಯ ಬೆಂಬಲವಿದ್ದು ಬುದ್ಧಿ ಹೇಳಲು ಹೋದರೆ ನಮ್ಮ ಮೇಲೆಯೇ ತಿರುಗಿ ಬೀಳುತ್ತಾರೆ ಎಂದು ಆರೋಪಿಸಿದರು.
ಇದೇ ವಿಚಾರವಾಗಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮೇಲೆ ಕಾರಣವಿಲ್ಲದೆ ಹಲ್ಲೆ ಮಾಡುತ್ತಾನೆ. ಗ್ರಾಮದಲ್ಲಿ ಒಬ್ಬೊಬ್ಬರೆ ಯಾರಾದರೂ ನಡೆದುಕೊಂಡು ಹೋಗುತ್ತಿದ್ದರೆ ಏಕಾಏಕಿ ಗಲಾಟೆ ಮಾಡುತ್ತಾನೆ. ಮೋಹಿತ್ ಶಿಕ್ಷಿತನೇ ಆಗಿದ್ದು, ಇತ್ತೀಚೆಗೆ ಅನಾಗರಿಕನಂತೆ ವರ್ತಿಸುತ್ತಿದ್ದಾನೆ. ಆತನ ಕಿರುಕುಳಕ್ಕೆ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಚನ್ನರಾಯಪಟ್ಟಣ ಪೊಲೀಸರು ಸಹ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ. ಆತನನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಜವರೇಗೌಡ, ಭವಾನಿಗೌಡ, ಪ್ರಸಾದ್, ಪ್ರಮೋದ್, ಮಂಜೇಗೌಡ, ಮಮತಾ, ಶಿವಮ್ಮ, ನೇಹಾ, ರಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net