ಯುವಕ-ಯುವತಿಯರಿಂದ ಜೈನ ಸನ್ಯಾಸ ದೀಕ್ಷೆ ಸ್ವೀಕಾರ

h26-Sheetal Ben
Published on

ಹುಬ್ಬಳ್ಳಿ : ನಗರದ ಕುಸುಗಲ್ಲ ರಸ್ತೆಯ ವಾಸುಪೂಜ್ಯ ಭವನದಲ್ಲಿ ಗುರುವಾರದಂದು ದೇಶದ ವಿವಿಧೆಡೆಯ ಜೈನ ಧರ್ಮದ 9 ಯುವಕ-ಯುವತಿಯರು ಸನ್ಯಾಸ ದೀಕ್ಷೆ ಪಡೆದುಕೊಂಡರು.

ಆಚಾರ್ಯ ಶ್ರೀ ಅಜಿತಶೇಖರ ಸೂರಿಶ್ವರಜಿ, ಆಚಾರ್ಯ ಶ್ರೀ ವಿಮಲಬೋದಿಜಿ, ಮಂತ್ರಶೇಖರ ಸೂರಿಜಿ ಅವರು ಆರು ಯುವಕರು ಹಾಗೂ ನಾಲ್ವರು ಯುವತಿಯರಿಗೆ ಸನ್ಯಾಸ ದೀಕ್ಷೆ ನೀಡಿದರು.

ಪೂಜ್ಯ ಶ್ರೀ ನೇಮಿಜಿನಶೇಖರ ವಿಜಯಜಿ (ಊರು ಹಾಗೂ ಮೊದಲಿನ ಹೆಸರು ಗುಂಟೂರನ ಮುಮುಕ್ಷು ಯಶಭಾಯಿ), ಪೂಜ್ಯ ಶ್ರೀ ಋಷಭಶೇಖರ ವಿಜಯಜಿ (ವಿಜಯವಾಡದ ಮುಮುಕ್ಷು ರಾಹುಲ್ ಭಾಯಿ), ಪೂಜ್ಯ ಶ್ರೀ ಕಲ್ಪತರುಶೇಖರ ವಿಜಯಜಿ (ಮೈಸೂರಿನ ಮುಮುಕ್ಷು ಕೃಷ್​ಭಾಯಿ), ಪೂಜ್ಯ ಶ್ರೀ ಬೋಧಿಲಾಭಶೇಖರ ವಿಜಯಜಿ (ಚೆನೈನ ಮುಮುಕ್ಷು ವಿಶೇಷ ಭಾಯಿ), ಪೂಜ್ಯ ಶ್ರೀ ಪಾರ್ಶ್ವಶೇಖರ ವಿಜಯಜಿ (ರತ್ನಾಗಿರಿಯ ಮುಮುಕ್ಷು ಪ್ರೀತಭಾಯಿ), ಪೂಜ್ಯ ಶ್ರೀ ಚೈತ್ಯಶೇಖರ ವಿಜಯಜಿ (ಹುಬ್ಬಳ್ಳಿಯ ಮುಮುಕ್ಷು ದರ್ಶನ ಭಾಯಿ), ಪೂಜ್ಯ ಶ್ರೀ ವಿದೇಶಜ್ಯೋತಿಶ್ರೀಜಿ (ಹುಬ್ಬಳ್ಳಿಯ ಮುಮುಕ್ಷು ಇಶಾ ಬೆನ್), ಪೂಜ್ಯ ಶ್ರೀ ಜಿನಂಶಜ್ಯೋತಿಶ್ರೀಜಿ (ಹುಬ್ಬಳ್ಳಿಯ ಮುಮುಕ್ಷು ಶೀತಲ್​ಬೆನ್), ಪೂಜ್ಯ ಶ್ರೀ ದೆಹತಿಥಜ್ಯೋತಿಶ್ರೀಜಿ (ಹುಬ್ಬಳ್ಳಿಯ ಮುಮುಕ್ಷು ದರ್ಶಿಬೆನ್) ಅವರು ಸನ್ಯಾಸ ದೀಕ್ಷೆ ಪಡೆದುಕೊಂಡರು.

ಸನ್ಯಾಸ ದೀಕ್ಷೆ ಪಡೆದುಕೊಂಡವರೆಲ್ಲ ಶ್ವೇತವರ್ಣದ ಬಟ್ಟೆ ಧರಿಸಿದರು. ಕೇಶಲೋಚನ ಮಾಡಿಕೊಂಡರು. ಆಚಾರ್ಯಶ್ರೀಗಳು ಧಾರ್ವಿುಕ ಬೋಧನೆ ಮಾಡಿದರು.

ಹುಬ್ಬಳ್ಳಿಯ ಭವಿಕುಮಾರಿ ಮುಕೇಶ ಜೈನ್ ಅವರು ಜ. 28ರಂದು ಗಬ್ಬೂರಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.

ಶ್ರೀ ಜೈನ ಮರುಧರ ಸಂಘ, ಕೇಶ್ವಾಪುರ ವಾಸು ಪೂಜ್ಯ ಟ್ರಸ್ಟ್, ಕೇಶ್ವಾಪುರ ನಾಕೋಡ ಜೈನ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಮುಖರಾದ ಶ್ರೀ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್, ಶ್ರೀ ಜೈನ ಮರುಧರ ಸಂಘದ ಅಧ್ಯಕ್ಷ ಪುಕುರಾಜ ಸಂಘವಿ, ವಾಸುಪೂಜ್ಯ ಟ್ರಸ್ಟ್ ಅಧ್ಯಕ್ಷ ಮೋಹನಲಾಲ್ ಜೈನ್, ನಾಕೋಡ ಜೈನ್ ಮಂದಿರದ ಅಧ್ಯಕ್ಷ ಕಾಂತಿಲಾಲ್ ಜೈನ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net