

ಮೈಸೂರು: ಯುವ ಸಮೂಹ ಸರ್ಕಾರಿ ಸೇವೆಗೆ ಬರಬೇಕು. ಸೇವಾ ಮನೋಭಾವ ಬೆಳೆಸಿಕೊಂಡು ನಾಡು-ನುಡಿಯ ಸೇವೆ ಮಾಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 30 ದಿನಗಳ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ನಿಷ್ಠೆ ಇರಬೇಕು. ಅಧಿಕಾರಿಗಳಾದ ಮೇಲೆ ನಿಲುವು ಬದಲಾಗಬಾರದು. ರಾಷ್ಟ್ರೀಯ ಐಕ್ಯತೆ, ಸಮಾನತೆ, ಸಾಮಾಜಿಕ ಕಳಕಳಿಯಲ್ಲಿ ತೊಡಗಿಸಿಕೊಳ್ಳಬೇಕು. ಜನರು ಅಧಿಕಾರಿಗಳ ಮೇಲೆ ವಿಶ್ವಾಸ ಇಟ್ಟಿರುತ್ತಾರೆ. ಜತೆಗೆ ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆಯಿಂದ ಇರಬೇಕು.
ನಾವೆಲ್ಲರೂ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇವೆ, ಸ್ಥಳೀಯ ಸಂಸ್ಥೆಗಳನ್ನು ನಿಂದಿಸುತ್ತೇವೆ, ರಸ್ತೆ ಸರಿಯಿಲ್ಲ ಎಂದರೆ ಸರ್ಕಾರವನ್ನು ಟೀಕಿಸುತ್ತೇವೆ. ಆದರೆ ನಾವು ವ್ಯವಸ್ಥೆಯೊಳಗೆ ಬಂದಾಗ ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ಉನ್ನತ ಶಿಕ್ಷಣ ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿದೆ. ಪದವಿ ಪಡೆದವರೆಲ್ಲ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯಬಹುದು. ಯುವ ಸಮೂಹ ಸರ್ಕಾರಿ ಕೆಲಸಕ್ಕೆ ಸೇರಬೇಕು. ಪರೀಕ್ಷೆ ಬಗ್ಗೆ ಭಯ ಬೇಡ. ಸಿದ್ಧತೆ ನಿರಂತರವಾಗಿರಲಿ. ಪ್ರತಿದಿನ ಪತ್ರಿಕೆ ಓದಿ. ಪರೀಕ್ಷೆ ವೇಳೆಯಲ್ಲಿ ಸಮಯ ನಿರ್ವಹಣೆಯ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪರೀಕ್ಷಾರ್ಥಿಗಳು ಒಂದು ಪರೀಕ್ಷೆ ಬರೆದ ಕೂಡಲೇ ಯಶಸ್ಸು ಬೇಕೆಂದು ಅಪೇಕ್ಷಿಸುತ್ತಾರೆ. ಇಲ್ಲವಾದರೆ ಅಲ್ಲಿಗೆ ಬಿಟ್ಟುಬಿಡುತ್ತಾರೆ. ಪರೀಕ್ಷೆ ಬರೆದ ಮೊದಲೇ ವರ್ಷದಲ್ಲಿ ಎಲ್ಲವೂ ನಿರ್ಧಾರವಾಗುವುದಿಲ್ಲ. ಹಾಗಂತ ಐದು ಹತ್ತು ವರ್ಷ ತೆಗೆದುಕೊಳ್ಳಬಾರದು. ನಿಮ್ಮ ಆತ್ಮಗೌರವ ಪರೀಕ್ಷೆಗಳಿಂದ ನಿರ್ಧಾರವಾಗಲ್ಲ ಎಂಬುದನ್ನು ಮೊದಲು ತಿಳಿಯಿರಿ ಎಂದರು.
ನಿಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನು ಅರಿಯಿರಿ ಎಂದು ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ಬಗ್ಗೆ ಅಭ್ಯರ್ಥಿಗಳಿಗಿದ್ದ ಗೊಂದಲ ನಿವಾರಿಸಿ, ಕೆಲವು ಸಲಹೆ ನೀಡಿದರು.
ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಮಾತನಾಡಿ, ಮನೋಧರ್ಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಹೀಗಾಗಿ ಎಲ್ಲರೂ ಮನೋಧರ್ಮ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಐಎಎಸ್ ಹಾಗೂ ಕೆಎಎಸ್ ಅಧಿಕಾರಿಯಾಗಬೇಕಾದರೆ ಅದು ನಮ್ಮಿಂದ ಏನನ್ನೊ ಬಯಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು. ಜತೆಗೆ ಅದನ್ನು ಪೂರ್ಣಗೊಳಿಸುವ ಛಲ ವಿಶ್ವಾಸವಿರಬೇಕು ಎಂದು ಹೇಳಿದರು.
ಅಧಿಕಾರಿಗಳಿಗೆ ತುಂಬ ಒತ್ತಡ ಇರುತ್ತದೆ. ಎಲ್ಲ ಒತ್ತಡವನ್ನು ನಿವಾರಿಸಿಕೊಂಡು ಸಾರ್ವಜನಿಕ ಸೇವೆ ಮಾಡಬೇಕು. ನಮ್ಮ ದೇಶವೇ ನಮಗೆ ನಾಯಕ. ಸರ್ಕಾರಿ ಸೇವೆಗೆ ಬಂದ ಮೇಲೆ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸೋತೆ ಎಂದು ಕೊರಗಬೇಡಿ. ಸೋಲಿಗೆ ಸಾವಿರ ಕಾರಣ ಇರುತ್ತದೆ.
ಗೆಲುವಿಗೆ ಯಾವುದೇ ಕಾರಣವಿರಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಪ್ರತಿಯೊಬ್ಬರ ಯಶಸ್ಸಿಗೆ ಪರಿಶ್ರಮ ಇರಬೇಕು. ಜತೆಗೆ ನಿಮ್ಮೆಲ್ಲರ ಗೆಲುವಿಗೆ ನೀವೇ ಹೊಣೆ ಎಂದು ಹೇಳಿದರು.
ಕುಲಸಚಿವ ಕೆ.ಬಿ ಪ್ರವೀಣ, ಡೀನ್‌ಗಳಾದ ಡಾ.ಎನ್.ಲಕ್ಷ್ಮೀ, ಪ್ರೊ.ರಮಾನಾಥಂನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.
*9
ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟಿಸಿದರು. ಪ್ರೊ.ಶರಣಪ್ಪ ವಿ.ಹಲಸೆ, ಡಾ.ಪಿ ಶಿವರಾಜು, ಕೆ.ಬಿ ಪ್ರವೀಣ, ಡಾ.ಎನ್.ಲಕ್ಷ್ಮೀ, ಪ್ರೊ.ರಮಾನಾಥಂನಾಯ್ಡು, ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.